ಮುಸ್ಲಿಮರು ಹೆಚ್ಚಿರುವ ಏರಿಯಾಗಳ ಮುಖ್ಯ ರಸ್ತೆಗಳಲ್ಲಿ ಅಣ್ಣಮ್ಮ ದೇವಿ ಮೆರವಣಿಗೆ ನಡೆಸಲು ಅನುಮತಿ ನೀಡಬೇಡಿ. ರಾಜ್ಯದಲ್ಲಿ ಈಗಾಗಲೇ ಎರಡು ಕೋಮಿನ ನಡುವೆ ಸಾಕಷ್ಟು ಸಂಘರ್ಷ(Conflict) ನಡೆಯುತ್ತಿದೆ.

ಈ ರೀತಿಯ ಮೆರವಣಿಗೆಗಳು ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗುತ್ತವೆ. ಹೀಗಾಗಿ ಅಣ್ಣಮ್ಮ ದೇವಿ ಮೆರವಣಿಗೆ ಸಾಗುವ ದಾರಿಯನ್ನು ಬದಲಾವಣೆ ಮಾಡಬೇಕೆಂದು ಬೆಂಗಳೂರು ದಕ್ಷಿಣ(Bengaluru South) ಡಿಸಿಪಿಗೆ ವ್ಯಕ್ತಿಯೊಬ್ಬರು ಮನವಿ ಮಾಡಿದ್ದಾರೆ. ಬೆಂಗಳೂರಿನ ಗುಲಾಬ್ ಪಾಶಾ ಎಂಬವರು ಬೆಂಗಳೂರಿನ ದಕ್ಷಿಣ ಡಿಸಿಪಿಗೆ ಪತ್ರ ಬರೆದಿದ್ದು, ಯಲಚೇನಹಳ್ಳಿಯ(Yelechanahalli) ಬಿಜೆಪಿ ಕಾರ್ಪೋರೇಟರ್ ಬಾಲಕೃಷ್ಣ ಅವರ ನೇತೃತ್ವದಲ್ಲಿ ಅಣ್ಣಮ್ಮ ದೇವಿ ಮೆರವಣಿಗೆ ನಡೆಯಲಿದೆ.
ಏಪ್ರಿಲ್ 23ರಂದು ರಾತ್ರಿ 8 ಗಂಟೆಗೆ ಈ ಮೆರವಣಿಗೆಯನ್ನು ಇದೇ ಮೊದಲ ಬಾರಿಗೆ ಆಯೋಜನೆ ಮಾಡಲಾಗಿದೆ. ಮೊದಲ ಬಾರಿ ನಡೆಯುತ್ತಿರುವ ಈ ಮೆರವಣಿಗೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಫಯಾಜ್‍ಬಾದ್ ಮತ್ತು ಕನಕನಗರ ಮಾರ್ಗವಾಗಿ ಸಾಗಲಿದೆ. ಈ ವೇಳೆ ಅಹಿತಕರ ಘಟನೆ ನಡೆಯುವ ಸಾದ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಣ್ಣಮ್ಮ ದೇವಿ ಮೆರವಣಿಗೆ ಸಾಗುವ ಮಾರ್ಗವನ್ನು ಬದಲಾವಣೆ ಮಾಡಬೇಕೆಂದು ಗುಲಾಬ್ ಪಾಶಾ ಮನವಿ ಮಾಡಿದ್ದಾರೆ.
ಇನ್ನು ಈ ಮೆರವಣಿಗೆ ಸಾಗುವ ಮಾರ್ಗದಲ್ಲಿ ಮಸೀದಿ ಇದ್ದು, ಸಂಜೆ ರಂಜಾನ್ ಪ್ರಾರ್ಥನೆ ಕೂಡಾ ನಡೆಯುತ್ತದೆ. ಹೀಗಾಗಿ ಫಯಾಜ್‍ಬಾದ್ ಮತ್ತು ಕನಕನಗರದಲ್ಲಿ ಮೆರವಣಿಗೆ ನಡೆಸದಂತೆ ನಿಬರ್ಂಧ ಹೇರಬೇಕು. ಈ ಮೆರವಣಿಗೆ ರಾತ್ರಿ 8 ಗಂಟೆಯಿಂದ ರಾತ್ರಿ 12 ಗಂಟೆಯ ವರೆಗೆ ನಡೆಯಲಿದೆ. ಹೀಗಾಗಿ ಕೋಮುಗಲಭೆ ನಡೆಯುವ ಸಾಧ್ಯತೆ ಹೆಚ್ಚಿದ್ದು, ಈಗಲೇ ನಮಗೆ ಭಯವಾಗುತ್ತಿದೆ. ಈ ಎಲ್ಲ ಕಾರಣದಿಂದ ಮೆರವಣಿಗೆಯ ಮಾರ್ಗ ಬದಲಾವಣೆ ಮಾಡಬೇಕೆಂದು ಕೋರಿದ್ದಾರೆ.