Mysore Dussehra celebration begins: Sahitya Dr. Hampa Nagarajaiah
Mysore: ಇಂದಿನಿಂದ ರಾಜ್ಯದೆಲ್ಲಡೆ ದಸರಾ ಹಬ್ಬದ (Dussehra Festival) ಸಂಭ್ರಮ ಆರಂಭವಾಗಿದೆ. ವಿಶ್ವ ವಿಖ್ಯಾತ ಮೈಸೂರು ನಾಡ ಹಬ್ಬದ ಸಲುವಾಗಿ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಬೆಳ್ಳಿಯ ರಥದಲ್ಲಿ ಪ್ರತಿಷ್ಠಾಪನೆಯಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಾಹಿತಿ ಡಾ. ಹಂಪ ನಾಗರಾಜಯ್ಯ ಪುಷ್ಪಾರ್ಚನೆ ಸಲ್ಲಿಸಿದರು. ಈ ಮೂಲಕ 10 ದಿನಗಳ ದಸರಾ ಉತ್ಸವ 2024ಕ್ಕೆ ಅವರು ವಿಧ್ಯುಕ್ತ ಚಾಲನೆ ನೀಡಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ (Chamundi Hill) ತಾಯಿಗೆ ಬೆಳಗ್ಗೆ 4 ಗಂಟೆಯಿಂದಲೇ ಅನೇಕ ಪೂಜಾ ಕೈಂಕರ್ಯಗಳು, ವಿಶೇಷ ಪೂಜೆಗಳು ನಡೆಸಲಾಯಿತು. ನಂತರ ಚಾಮುಂಡಿಬೆಟ್ಟದಲ್ಲಿ ದೇವಾಲಯದ ಪಕ್ಕದ ಆವರಣದಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ಸಜ್ಜುಗೊಳಿಸಲಾಗಿತ್ತು. ವೇದಿಕೆಯಲ್ಲಿ 30ರಿಂದ 45 ಮಂದಿ ಗಣ್ಯರು ಆಸೀನರಾಗಲು ಹಾಗೂ ಸಮಾರಂಭ ವೀಕ್ಷಿಸಲು 800 ಆಸನದ ವ್ಯವಸ್ಥೆ ಮಾಡಲಾಗಿತ್ತು. ಮುಂಜಾಗ್ರತಾ ದೃಷ್ಟಿಯಿಂದ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಂಡು ಬಂತು.
ಇನ್ನು ಮೈಸೂರಿನ (Mysore) ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹಂಪ ನಾಗರಾಜಯ್ಯ ಅವರು ದಸರಾ ಎಂಬುದು ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ, ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತ. ದಸರಾ ಅರಮನೆ ಹಬ್ಬವಲ್ಲ, ಜನ ಆರಿಸಿದ ಸರ್ಕಾರ ನಡೆಸುವ ಹಬ್ಬ .
ಇಂದಿನ ಯುವಕರು ಮೋದಿ ಮೋದಿ ಎಂದು ಮುಂದುವರಿಯುತ್ತಿದ್ದಾರೆ. ಹಾಗೆಂದು ಸರ್ಕಾರ ಅಸ್ಥಿರಗೊಳಿಸುವ ಕೆಲಸವನ್ನು ಯಾರೂ ಮಾಡಬಾರದು.ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ ಎದೆಗುಂದದೆ ಸೆಡ್ಡು ಹೊಡೆದು ಗಟ್ಟಿಯಾಗಿ ನಿಂತಿದ್ದಾರೆ. ಜೀವನವೇ ದೊಡ್ಡ ಅಖಾಡ, ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ, ಸೌಮ್ಯ ಸ್ವಭಾವ ದೌರ್ಬಲ್ಯವಲ್ಲ ಎಂದರು. ಆ ಮೂಲಕ ಹಂಪ ನಾಗರಾಜಯ್ಯ (Hampa Nagarajaiah) ಪರೋಕ್ಷವಾಗಿ ಸಿದ್ದರಾಮಯ್ಯಗೆ ಧೈರ್ಯ ತುಂಬಿದ್ದಾರೆ.