ಮೈಸೂರು ಅರಮನೆ ನಮ್ಮದೇ ಆಸ್ತಿ; ಸರ್ಕಾರ ಕೊಟ್ಟಿದ್ದಲ್ಲ
ಯದುವಂಶದ ವಾರಸುದಾರ ಸರ್ಕಾರವಲ್ಲ ಎಂದು ಸ್ಪಷ್ಟನೆ
ಮಾತುಕತೆ ಮೂಲಕ ವಿವಾದ ಬಗೆಹರಿಸಲು ಸಿದ್ಧ ಎಂದ ಪ್ರಮೋದಾದೇವಿ
Mysore : ಮೈಸೂರು ಅರಮನೆ, ಅದರ ಆಸ್ತಿ ಹಾಗೂ ದಸರಾ ಸಂಪ್ರದಾಯಗಳ (Mysore Palace our property says Pramoda Devi) ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವೆ ನಡೆಯುತ್ತಿರುವ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಅರಮನೆಯ ಸಂಪೂರ್ಣ ಜಾಗವನ್ನು ಸರ್ಕಾರಕ್ಕೆ ಹಸ್ತಾಂತರಿಸಿಲ್ಲ.
ನಾವು ಅರಮನೆಯಲ್ಲಿ ವಾಸಿಸಲು ಸರ್ಕಾರ ಜಾಗ ನೀಡಿಲ್ಲ, ಅದು ನಮ್ಮ ಪೂರ್ವಜರಿಂದ ಬಂದಿರುವ ಸ್ವಂತ ಆಸ್ತಿ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ (Pramoda Devi Wodeyar) ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರಮನೆಯ ಹಕ್ಕು, ಅಂಬಾರಿ, ಸಿಂಹಾಸನ ಹಾಗೂ ದಸರಾ ಆಚರಣೆಗಳ ಕುರಿತು ತಮ್ಮ ನಿಲುವನ್ನು
ವಿವರಿಸಿದ್ದಾರೆ. ಸರ್ಕಾರ ಯದುವಂಶದ ವಾರಸುದಾರನಲ್ಲ ಎಂದು ಹೇಳುವ ಮೂಲಕ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಅರಮನೆ ಬೋರ್ಡ್ ಮತ್ತು ಅರಮನೆಯ ಜಾಗ ಸರ್ಕಾರಕ್ಕೆ ಸೇರಿದ್ದು, ರಾಜಮನೆತನದವರು ಉಳಿದುಕೊಳ್ಳಲು ಮಾತ್ರ ಸ್ವಲ್ಪ ಜಾಗ ನೀಡಲಾಗಿದೆ ಎಂಬ ಸಚಿವ
ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರ ಇತ್ತೀಚಿನ ಹೇಳಿಕೆಗೆ ಪ್ರಮೋದಾದೇವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅರಮನೆಯ ವಾಸದ ವಿಭಾಗ ಇಂದಿಗೂ ರಾಜಮನೆತನದ ಸುಪರ್ದಿಯಲ್ಲಿದೆ. ಸಾರ್ವಜನಿಕರು ವೀಕ್ಷಣೆ ಮಾಡುವ ಮುಂಭಾಗದ ಭಾಗವನ್ನು ಮಾತ್ರ ಸರ್ಕಾರ ನಿರ್ವಹಿಸುತ್ತಿದೆ
ಎಂದು ತಿಳಿಸಿದ್ದಾರೆ. ಅಲ್ಲದೆ, ಅಂಬಾರಿ ಮತ್ತು ರಾಜಸಿಂಹಾಸನ ಸೇರಿದಂತೆ ಹಲವು ಪ್ರಮುಖ ವಸ್ತುಗಳು ಅರಮನೆ ಸ್ವಾಧೀನ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ.
ಅವು ಸಂಪೂರ್ಣ ಖಾಸಗಿ ಆಸ್ತಿಗಳಾಗಿದ್ದು, ಹಿಂದೆಯೂ ನಮ್ಮ ವಶದಲ್ಲಿದ್ದವು, ಮುಂದೆಯೂ ನಮ್ಮದೇ ಆಗಿರಲಿವೆ ಎಂದು ಹೇಳಿದ್ದಾರೆ. 1947ರಲ್ಲಿಯೇ ಖಾಸಗಿ ಆಸ್ತಿಗಳ
ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, 1951ರಲ್ಲಿ ವಿ.ಪಿ. ಮೆನನ್ (V. P. Menon) ಅವರು ಅದಕ್ಕೆ ಅಧಿಕೃತ ಅನುಮೋದನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ, ಅರಮನೆಯ ನಿರ್ವಹಣೆ ವಿಚಾರದಲ್ಲಿಯೂ ಸರ್ಕಾರದ ವಿರುದ್ಧ ಪ್ರಮೋದಾದೇವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಯಚಾಮರಾಜ ಒಡೆಯರ್ (Jayachamaraja Wodeyar) ನಿಧನದ ಬಳಿಕ 8 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಪಾವತಿಸಬೇಕಾದ ಪರಿಸ್ಥಿತಿ ಎದುರಾದಾಗ, ಅರಮನೆಯ ನಿರ್ವಹಣೆ ನೋಡಿಕೊಳ್ಳುವುದಾಗಿ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.
ಆದರೆ ಒಪ್ಪಂದದ ಪ್ರಕಾರ ನಡೆದುಕೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಅರಮನೆಯನ್ನು 30 ದಿನಗಳಲ್ಲಿ ಮರಳಿಸುವಂತೆ ನ್ಯಾಯಾಲಯ ಆದೇಶಿಸಿದ್ದರೂ ಸರ್ಕಾರ ಅದನ್ನು ಜಾರಿಗೆ ತಂದಿಲ್ಲ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳಿಗೆ ರಾಜಮನೆತನದ ಖಾಸಗಿ ಆಸ್ತಿಗಳ ಕುರಿತು ಸಮರ್ಪಕ ಮಾಹಿತಿ ಇಲ್ಲ ಎಂದೂ ಅಸಮಾಧಾನ ಹೊರಹಾಕಿದ್ದಾರೆ. ಈ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರಿಸುವ ಹಕ್ಕು ತಮಗಿದೆ ಎಂದು ತಿಳಿಸಿದ್ದಾರೆ.
ಇನ್ನು ದಸರಾ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಿಗೆ ಪೊಲೀಸ್ ಇಲಾಖೆಯಿಂದ ಅಡ್ಡಿಯಾಗಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಜಟ್ಟಿ ಕಾಳಗ ಹಾಗೂ ಪಟ್ಟದ ಕತ್ತಿಯಿಂದ ಕುಂಬಳಕಾಯಿ ಕತ್ತರಿಸುವುದು ರಾಜಮನೆತನದ ಪರಂಪರೆಯ ಧಾರ್ಮಿಕ ಆಚರಣೆಗಳಾಗಿವೆ.
ಇಂತಹ ವಿಧಿವಿಧಾನಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ. ಬ್ರಹ್ಮಪುರಿ ಗೇಟ್ (Brahmapuri Gate) ಬಳಿ ಕರ್ತವ್ಯ ಲೋಪ ಎಸಗಿದ ಎಸಿಪಿ ಚಂದ್ರಶೇಖರ್ (ACP Chandrashekhar) ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಅಂಬಾರಿ ಮೆರವಣಿಗೆಗೆ ಸರ್ಕಾರ ನೀಡುತ್ತಿರುವುದು ಬಾಡಿಗೆಯಲ್ಲ, ಬದಲಿಗೆ ರಾಯಲ್ಟಿ.
ರಾಜಮನೆತನದ ಖಾಸಗಿ ವಸ್ತುವನ್ನು ಬಳಸಿಕೊಂಡು ಸರ್ಕಾರ ಪ್ರಚಾರ ಪಡೆಯುತ್ತಿರುವುದರಿಂದ ರಾಯಲ್ಟಿ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೊತ್ತ ಎಷ್ಟಿದೆ ಎಂಬುದನ್ನು ಬಹಿರಂಗಪಡಿಸುವುದಕ್ಕೆ ತಮ್ಮ ಆಕ್ಷೇಪವಿಲ್ಲ ಎಂದಿದ್ದಾರೆ.
ದಸರಾ ಆಚರಣೆಯ ವಿಚಾರವಾಗಿ ಮಾತನಾಡಿದ ಪ್ರಮೋದಾದೇವಿ, ಸರ್ಕಾರ ನಡೆಸುತ್ತಿರುವುದು ಯದುವಂಶದ ಧಾರ್ಮಿಕ ಆಚರಣೆಯಲ್ಲ, ಅದೊಂದು ಸಾಂಸ್ಕೃತಿಕ ಕಾರ್ಯಕ್ರಮ ಅಷ್ಟೇ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ದಸರಾ ಆಚರಿಸುವ ಆಸಕ್ತಿ ಇದ್ದರೆ ಸ್ವಂತ ಅಂಬಾರಿಯನ್ನು ತಯಾರಿಸಿಕೊಳ್ಳಲಿ, ಅದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ಸಲಹೆ ನೀಡಿದ್ದಾರೆ.
1998ರಲ್ಲಿ ಒಂದು ಕೋಟಿ ರೂಪಾಯಿ ಹಾಗೂ ಒಂದು ಎಕರೆ ಜಾಗ ನೀಡುವುದಾಗಿ ಹೇಳಿ ಆರು ತಿಂಗಳಲ್ಲಿ ಅರಮನೆ ಖಾಲಿ ಮಾಡುವಂತೆ ಸೂಚಿಸಲಾಗಿತ್ತು.
ಆದರೆ ತಮ್ಮ ಪತಿ ದಿವಂಗತ ಶ್ರೀಕಂಠದತ್ತ ಒಡೆಯರ್ (Srikantadatta Wodeyar) ಅದಕ್ಕೆ ಒಪ್ಪಿರಲಿಲ್ಲ ಎಂದೂ ನೆನಪಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರು
ಮಾತುಕತೆಗೆ ಮುಂದಾದರೆ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿ, ಈ ವಿವಾದವನ್ನು ಅನಗತ್ಯವಾಗಿ ವೈಭವೀಕರಿಸಬಾರದು ಎಂದು ಮನವಿ ಮಾಡಿದ್ದಾರೆ.
ಇದನ್ನು ಓದಿ : https://vijayatimes.com/bus-ticket-price-increases/