ನವದೆಹಲಿ, ಮಾ. 17: ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ನಿಗೂಢವಾಗಿ ಸಾವನ್ನಪ್ಪಿದ್ದು, ದೆಹಲಿಯ ತಮ್ಮ ನಿವಾಸದಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಡಿ ಕ್ಷೇತ್ರದ ಸಂಸದರಾಗಿದ್ದ 62 ವರ್ಷದ ರಾಮ್ ಸ್ವರೂಪ್ ಶರ್ಮಾ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ. ಶರ್ಮಾ ಸಾವನ್ನಪ್ಪಿದ ಬೆನ್ನಲ್ಲೇ ಬಿಜೆಪಿಯ ಸಂಸದೀಯ ಸಭೆಯನ್ನು ರದ್ದುಪಡಿಸಲಾಗಿದೆ.
ಶರ್ಮಾ ಭಾರತೀಯ ಜನತಾ ಪಕ್ಷಕ್ಕೆ ಸೇರಿದವರಾಗಿದ್ದು, ಮಂಡಿ ಜಿಲ್ಲೆಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯವರಾದ ಶರ್ಮಾ ಅವರು ಮಂಡಿ ಲೋಕಸಭಾ ಕ್ಷೇತ್ರದಿಂದ 2014 ಮತ್ತು 2019ರಲ್ಲಿ ಎರಡು ಬಾರಿ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿ ಗೆದ್ದಿದ್ದರು. ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿಯೂ ಅವರು ಜವಾಬ್ದಾರಿ ನಿಭಾಯಿಸಿದ್ದಾರೆ. ರಾಮ್ ಸ್ವರೂಪ್ ಶರ್ಮಾ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ಧಾರೆ.