ನಾಳೆಯಿಂದ ನಾಡ ಹಬ್ಬ ದಸರಾದ ಆರಂಭೋತ್ಸವ. ನವದುರ್ಗೆಯರನ್ನು ಆರಾಧಿಸಿ ಪುನೀತರಾಗೋ ಶುಭಕ್ಷಣ. ಅದರಲ್ಲೂ ಕರುನಾಡಲ್ಲಿ ದಸರಾ ಹಬ್ಬಕ್ಕೆ ವಿಶೇಷ ಮಾನ್ಯತೆ. ಇದನ್ನು ನಾಡಹಬ್ಬ ಅಂತಲೇ ಪರಿಗಣಿಸಿ ಆಚರಿಸಲಾಗುತ್ತದೆ. ಅದರಲ್ಲೂ ಮೈಸೂರು ದಸರಾ ವಿಶ್ವವಿಖ್ಯಾತಿ ಪಡೆದಿದೆ. ದಸರಾ ಹಬ್ಬದ ಆಚರಣೆ ಈ ಬಾರಿ ಹೇಗೆ ನಡೆಯುತ್ತದೆ? ಕೋರೋನಾ ದಸರಾದ ಸಂತಸಕ್ಕೆ ಹೇಗೆ ಮಾರಕವಾಗಿದೆ ? ಇದನ್ನೆಲ್ಲಾ ತಿಳಿಯೋಣ.
ನಾಡಹಬ್ಬ ದಸರಾ ಎಂದರೆ ದೇವಿ ಜಗನ್ಮಾತೆಯನ್ನು ಆರಾದಿಸುವ ಹಬ್ಬ. ಪುರಾಣದಂತೆ ಜಗನ್ಮಾತೆ ದುಷ್ಟ ರಾಕ್ಷಸರನ್ನು ಸಂಹಾರ ಮಾಡಲು 9 ದಿನಗಳ ಕಾಲ 9 ರೂಪಗಳನ್ನು ತಾಳಿ ಮಹಿಶಾಸುರ ಎಂಬ ರಾಕ್ಷಸನ್ನು ಸಂಹಾರ ಮಾಡಿದಳು.
ಮಹಿಷಾಸುರನ ನಾಶಕ್ಕಾಗಿ ಈ ದೇವಿ ಜಗನ್ಮಾತೆಯು ಅವತಾರ ತಾಳಿದ ಈ 9 ದಿನಗಳಲ್ಲಿ ನವದುರ್ಗೆಯರನ್ನು ಆರಾದಿಸುವ ಹಾಗೂ 10ನೇ ದಿನವನ್ನು ವಿಜಯದಶಮಿ ಹಬ್ಬವಾಗಿ ಆಚರಿಸುವ ವಿಶಿಷ್ಟವಾದ ಹಬ್ಬವೇ ನವರಾತ್ರಿ ಹಬ್ಬ. ಭಕ್ತಿ ಶ್ರದ್ಧೆಯಿಂದ ದೇವಿಯ ವ್ರತಾಚರಣೆ, ಉಪಾಸನೆಯನ್ನು ಮಾಡಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗುವ, ಈ ಹಬ್ಬ ಎಂದರೆ ಕನ್ಯಾ ಕುಮಾರಿಯಿಂದ ಕಾಶ್ಮೀರದವರೆಗೂ ಆಚರಿಸುತ್ತಾರೆ.
ಸಂತೋಷ, ಸಡಗರ, ನಾಡು ನುಡಿ, ಸಂಸ್ಕೃತಿಯ ಪರಂಪರೆ. ದುಷ್ಟರನ್ನು ಶಿಕ್ಷಿಸುವ, ಶಿಷ್ಟರನ್ನು ರಕ್ಷಿಸುವ ದೇವಿ ಅವತಾರಗಳ ಹಬ್ಬ. ಈ ಹಬ್ಬಕ್ಕೆ ಕರುನಾಡಲ್ಲಿ ವಿಶೇಷ ಮಾನ್ಯತೆ ಇದೆ.
ಅದರಲ್ಲೂ ಮೈಸೂರು ದಸರಾ ವಿಶ್ವ ವಿಖ್ಯಾತ. ಇಲ್ಲಿ ಹತ್ತು ದಿನಗಳ ನಡೆಯೋ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಜಮನೆತನದ ಖಾಸಗಿ ದರ್ಬಾರು, ಅರಮನೆಯ ಅಂಗಳದಲ್ಲಿ ನಡೆಯುವ ಜಗಜಟ್ಟಿಗಳ ವಜ್ರಮುಷ್ಟಿ ಕಸರತ್ತು, ಇನ್ನೊಂದೆಡೆ ಆನೆಗಳ ಕಸರತ್ತು, ಚಾಮುಂಡಿ ದೇವಿಗೆ ಅಂಬಾರಿಯಲ್ಲಿ ವೈಭವಯುತ ಮೆರವಣಿಗೆ ಹೀಗೆ ಒಂದೇ, ಎರಡೇ…… ನಮ್ಮ ನಾಡು ಮಾತ್ರವಲ್ಲ ದೇಶ ವಿದೇಶದೆಲ್ಲೆಡೆಯಿಂದ ಈ ಸೊಬಗನ್ನು ಕಣ್ಣು ತುಂಬಿಸಿಕೊಳ್ಳಲು ಹಾಗೂ ದೇವಿಯ ದರ್ಶನ ಪಡೆಯಲು ಭಕ್ತಾದಿಗಳು ಹರಿದು ಬರುತ್ತಿದ್ದರು.
ನಾಡಿನ ಉದ್ದಗಲಕ್ಕೂ ಹಬ್ಬದ ಕಳೆ ತುಂಬಿ ನಾಡಿಗೆ ನಾಡೇ ಸಂತೋಷ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಿದ್ದರು. ಮಂಗಳೂರು ಮಡಿಕೇರಿ ಗೋಕರ್ಣ, ಮೈಸೂರು ಸೇರಿದಂತೆ ನಾಡಿನಾದ್ಯಂತ ಈ ಹಬ್ಬವನ್ನು ವಿಶೇಷವಾಗಿ, ವಿಭಿನ್ನವಾಗಿ ಆಚರಿಸಲಾಗುತ್ತದೆ.
ನಾಡ ಹಬ್ಬ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಜನರಲ್ಲಿ ಸಂಭ್ರಮ ಸಂತೋಷ ನೀಡಿದರೆ, ಈ ಹಬ್ಬ ಆರ್ಥಿಕವಾಗಿಯೂ ಜನರಿಗೆ ಅನುಕೂಲ ಮಾಡಿಕೊಡುತ್ತಿತ್ತು. ಹಲವಾರು ಉದ್ಯಮಗಳೂ ಈ ದಿನಗಳಲ್ಲಿ ವಾರ್ಷಿಕ ಉಳಿತಾಯ ಹಾಗೂ ಆರ್ಥಿಕ ಮುಗ್ಗಟ್ಟನ್ನೂ ಪರಿಹರಿಸಿಕೊಂಡು ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಿದ್ದರು.
ಆದರೆ ಈ ಬಾರಿಯ ದಸರಾಕ್ಕೆ ಕೊರೋನಾ ಕರಿಛಾಯೆ ಆವರಿಸಿದೆ ಎಂದರೆ ತಪ್ಪಾಗಲಾರದು. ದಸರಾ ಸಂಪೂರ್ಣ ಕಳೆಗುಂದಿದೆ. ಯಾವ ದೇವಾಲಯಗಳಲ್ಲಿಯೂ ನಾಡಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿಲ್ಲ. ಕೊರೋನಾ ಮಹಾ ಮಾರಿಯಿಂದ ಈ ಸಲದ ಹಬ್ಬ ಬರೀ ದೇವಿಯ ಪೂಜೆಗಷ್ಟೇ ಸೀಮಿತವಾಗಿದೆ, ಕತ್ತಲಲ್ಲೇ ಹಬ್ಬ ಕಳೆಯಲಿದೆ. ಸಾಂಪ್ರಾದಾಯಿಕವಾಗಿ ಯಾವುದೇ ವೈಭವವಿಲ್ಲದೆ ಮೆರವಣಿಗೆಯೂ ಇಲ್ಲದೆ ನಡೆಯಲಿದೆ. ನಾಡ ಹಬ್ಬದಲ್ಲಿ ಗ್ರಾಮೀಣ ಕ್ರೀಡೆಗಳು ,ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಸಾವಿರಾರು ಹಳ್ಳಿಗಳಿಂದ ಹಳ್ಳಿ ಸೊಗಡಿನ ಅನೇಕ ಸಾಂಸ್ಕೃತಿಕ ವಿಶೇಷತೆಗಳು, ನಡೆಯುತ್ತಿದ್ದವು. ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳಿಂದ ಈ ಸಲದ ದಸರಾ ದೂರವುಳಿಯಲಿದೆ.
ಕೊರೋನಾ ತಂದ ವಿಪತ್ತಿನಿಂದ ಜನ ಜೀವನದಲ್ಲಿ ಮರೆಯಲಾಗದಂತ ವರ್ಷವಾಗಲಿದೆ ಈ ವರ್ಷದ ನಾಡ ಹಬ್ಬ. ನಾಡಿನ ಉದ್ದಗಲದಲ್ಲೂ ವೈಭವವೇ ತುಂಬಿ ತುಳುಕುತ್ತಲಿದ್ದ ಹಬ್ಬ, ಈ ಸಲ ಯಾವ ಆಡಂಬರವಿಲ್ಲದೆ, ಯಾವ ಸದ್ದು ಗದ್ದಲವಿಲ್ಲದೆ, ಯಾವ ವ್ಯಾಪಾರ ವಹಿವಾಟೂ ಇಲ್ಲದೆ, ಸೂತಕದ ಛಾಯೆಯಲ್ಲೇ ಕಳೆದು ಹೋಗಲಿದೆ.
ಜನರ ಬರಗಾಲದ ಬವಣೆಗೆ ನಾಂದಿಯಾಗಲಿದೆ ನಾಳೆಯಿಂದ ನಡೆಯುವ ದಸರಾ ಹಬ್ಬ. ಕೊರೋನಾ ಸಾಂಕ್ರಾಮಿಕ ಸೋಂಕು ತಡೆ ಹಿಡಿಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಪಾಲಿಸಬೇಕಾದ ನಿಯಮಗಳನ್ನು ಉಲ್ಲಂಘಿಸಲು ಸಾದ್ಯವಿಲ್ಲದೆ, ದಸರಾ ಉತ್ಸವದ ಆಚರಣೆಯನ್ನು ಮೊಟಕು ಗೊಳಿಸಿ ಆಚರಿಸಲಾಗುತ್ತಿದೆ.
ನಾಳೆ ಆರಂಭವಾಗುವ ದಸರಾ ಯಾವ ಸಂಭ್ರಮವಿಲ್ಲದೆ ಮನೆ ಮನೆಗಳ ಒಳಗೇ ಆಚರಿಸಲು ಸೀಮಿತವಾದರೂ ಜನರಿಗೆ ಯಾವುದೇ ಉತ್ಸಾಹವಿಲ್ಲ. ಯಾಕೆಂದರೆ ಅನೇಕರ ಮನೆಗಳಲ್ಲಿ ಕೊರೋನಾದಿಂದ ಸಾವು ನೋವುಗಳು ಸಂಭವಿಸಿವೆ. ಕೆಲಸ ಕಾರ್ಯವಿಲ್ಲದೆ ಆರ್ಥಿಕವಾಗಿ ಜನ ಸಾಮಾನ್ಯರ ಕೈ ಬರಿದಾಗಿದೆ. ಇಂತಹದ್ದರಲ್ಲಿ ಹಬ್ಬದ ಉತ್ಸಾಹ ಕಳೆಗುಂದಿರುವುದು ಎಲ್ಲೆಡೆ ಕಾಣಬಹುದು.
ಹೂವಿನ ಮಾರ್ಕೆಟ್ ಗಳಲ್ಲಿ ತುಂಬಿ ತುಳುಕುತ್ತಿದ್ದ ರಾಶಿ ರಾಶಿ ಹೂವುಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಗಿಜಿಗಿಡುತ್ತಿದ್ದ ಮಾರ್ಕೆಟ್‌ಗಳೆಲ್ಲಾ ಬಿಕೋ ಅನ್ನುತ್ತಿವೆ. ಬಟ್ಟೆ ಅಂಗಡಿ, ಚಿನ್ನದ ಅಂಗಡಿಗಳಿಗೆ ವ್ಯಾಪಾರ ಇಲ್ಲದೆ ಅಂಗಡಿ ಮಾಲೀಕರು ತಲೆಮೇಲೆ ಕೈ ಇಟ್ಟುಕೊಳ್ಳುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ ನಾಳೆ ಆರಂಭವಾಗುವ ದಸರಾ ಹಬ್ಬ ಕೊರೋನಾ ಕರಿಛಾಯೆಯಲ್ಲಿ ಕರಗಿ ಹೋಗಲಿದೆ ಅನ್ನೋದು ಸ್ಪಷ್ಟ.
- ಸೀತಾ ನಾಗರಾಜ್