ಎ ಹರ್ಷ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ `ವಜ್ರಕಾಯ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟವರು ನಟಿ ನಭಾ ನಟೇಶ್. ಪಟಾಕಾ ಪಾರ್ವತಿ ಪಾತ್ರದಲ್ಲಿ ಬಿಂದಾಸ್ ಆಗಿ ನಟಿಸಿ ತಮ್ಮ ಮೊದಲ ಚಿತ್ರದಲ್ಲೇ ಕಮಾಲ್ ಮಾಡಿದ್ದ ನಭಾ ಇದೀಗ ಹೃತಿಕ್ ಜೊತೆಗೆ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ವಜ್ರಕಾಯ ಚಿತ್ರದ ಗೆಲುವಿನ ನಂತರ ಲೀ’ ಚಿತ್ರದಲ್ಲಿ ನಾಯಕಿಯಾಗಿ,
ಸಾಹೇಬ’ದಲ್ಲಿ ಅತಿಥಿ ಪಾತ್ರದಲ್ಲಿ ಈಕೆ ಕಾಣಿಸಿಕೊಂಡಿದ್ದರು. `ನನ್ನು ದೋಚುಕುಂಡುವಟೆ’ ಚಿತ್ರದ ಮೂಲಕ ತೆಲುಗು ಚಿತ್ರಜಗತ್ತಿಗೆ ಎಂಟ್ರಿ ಕೊಟ್ಟಿದ್ದ ನಭಾ ಅಧುಗೋ, ಇಸ್ಮಾರ್ಟ್ ಶಂಕರ್, ಡಿಸ್ಕೋ ರಾಜ, ಅಲ್ಲುಡು ಅಧುರ್ಸ್ ಸೇರಿದಂತೆ ಒಂದರ ಹಿಂದೊಂದು ತೆಲುಗು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದಾರೆ. ಮೆಘಾ ಸ್ಟಾರ್ ಚಿರಂಜೀವಿ ಅವರ ಸೋದರಳಿಯ ಸಾಯಿ ಧರಂ ತೇಜ್ ನಟನೆಯ ಸೋಲೋ ಬ್ರಾತುಕೆ ಸೋ ಬೆಟರ್ ಎನ್ನುವ ಸೂಪರ್ ಹಿಟ್ ಸಿನಿಮಾದಲ್ಲೂ ನಭಾ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ತೆಲುಗು ಚಿತ್ರರಂಗದ ಟಾಪ್ ನಟಿಯರಲ್ಲಿ ನಮ್ಮ ಕನ್ನಡದ ನಭಾ ನಟೇಶ್ ಕೂಡಾ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ನಭಾ ನಾಯಕಿಯಾಗಿ ನಟಿಸಿದ್ದ ಇಸ್ಮಾರ್ಟ್ ಶಂಕರ್ ಹತ್ತಿರತ್ತಿರ ನೂರು ಕೋಟಿ ಕಲೆಕ್ಷನ್ ಮಾಡಿತ್ತು. ಕೇವಲ ಎರಡೂವರೆ ವರ್ಷಗಳಲ್ಲಿ ನಭಾ ನಟೇಶ್ ನಟಿಸಿದ ತೆಲುಗು ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಬರೋಬ್ಬರಿ ಇನ್ನೂರ ಐವತ್ತು ಕೋಟಿಗೂ ಅಧಿಕ.
ಇಷ್ಟು ಕಡಿಮೆ ಅವಧಿಯೊಳಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಭಾ ಈಗ ವೆಬ್ ಸಿರೀಸ್ ಒಂದರಲ್ಲಿ ನಟಿಸುವುದರೊಂದಿಗೆ ಬಾಲಿವುಡ್ನಲ್ಲೂ ಖಾತೆ ತೆರೆಯುವ ಹಂತದಲ್ಲಿದ್ದಾರೆ. ಅದೂ ಹಿಂದಿ ಚಿತ್ರರಂಗದ ಖ್ಯಾತ ನಾಯಕನಟ ಹೃತಿಕ್ ರೋಷನ್ ಜೊತೆಗೆ. ಈಗ ಬಾಲಿವುಡ್ನ ಸ್ಟಾರ್ ನಟರು ವೆಬ್ ಸಿರೀಸ್ ಗಳಲ್ಲಿ ನಟಿಸುವ ಮೂಲಕ ಅಚ್ಚರಿ ಹುಟ್ಟುಹಾಕಿದ್ದಾರೆ.
ಅಭಿಷೇಕ್ ಬಚ್ಚನ್ ಮತ್ತು ಸೈಫ್ ಅಲಿ ಖಾನ್ ಮುಂತಾದ ಜನಪ್ರಿಯ ನಟರ ವೆಬ್ ಸರಣಿಗಳು ತಯಾರಾಗಿವೆ. ಸದ್ಯ ಹೃತಿಕ್ ಕೂಡಾ ಅದೇ ಹಾದಿಯಲ್ಲಿದ್ದಾರೆ. ಜಗತ್ತಿನಾದ್ಯಂತ ಹೆಸರು ಮಾಡಿರುವ `ದಿ ನೈಟ್ ಮ್ಯಾನೇಜರ್’ ವೆಬ್ ಸರಣಿಯ ಹಿಂದಿ ಅವತರಣಿಕೆಯಲ್ಲಿ ಹೃತಿಕ್ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದು, ಅದರಲ್ಲಿ ನಭಾ ಹೃತಿಕ್ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.
ಪೂಜಾ ಹೆಗಡೆ, ರಕುಲ್ ಪ್ರೀತ್ ಸಿಂಗ್, ಪ್ರಗ್ಯಾ ಜೈಸ್ವಾಲ್, ಶಾಲಿನಿ ಪಾಂಡೆ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಸಾಕಷ್ಟು ಜನ ನಟಿಯರು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿ, ನಂತರ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ನಭಾ ನಟೇಶ್ ಕೂಡಾ ಕನ್ನಡದಿಂದ ತೆಲುಗಿಗೆ ಹೋಗಿ, ಈಗ ಅಲ್ಲಿಂದ ಹಿಂದಿ ಚಿತ್ರರಂಗಕ್ಕೆ ಅಡಿಯಿರಿಸುತ್ತಿದ್ದಾರೆ. ಅಂದ, ಚೆಂದದ ಜೊತೆಗೆ ಅಭಿನಯದಲ್ಲೂ ಪಳಗಿರುವ ನಭಾ ಹಿಂದಿ ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳುತ್ತಾರೆ ಎನ್ನುವ ಅಭಿಪ್ರಾಯ ಎಲ್ಲೆಡೆ ಮೂಡಿಬರುತ್ತಿದೆ.