ನವದೆಹಲಿ, ಡಿ. 04: ವಿಶ್ವಾದ್ಯಂತ ಅನೇಕ ಸಂಶೋಧಕರು ಕಿಲ್ಲರ್ ಕರೊನಾ ಸೋಂಕನ್ನು ನಿರ್ಮೂಲನ ಮಾಡಲು ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅನೇಕ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇವೆ, ಆದರೆ ಇನ್ನೊಂದೆಡೆ ನಕಲಿ ಲಸಿಕೆ ಮಾರಾಟಗಾರರು ಎಲ್ಲೆಡೆ ಹೆಚ್ಚುತ್ತಿದ್ದಾರೆ, ಎಂಬುದಾಗಿ ಇಂಟರ್ ಪೋಲ್ ಎಚ್ಚರಿಕೆ ನೀಡಿದೆ.
ಇಂಗ್ಲೆಂಡ್ ‘ಫೈಜರ್’ ಲಸಿಕೆಗೆ ಅನುಮತಿಸಿದ ಬೆನ್ನಲ್ಲೇ ಇಂಟರ್ಪೋಲ್ ಈ ಎಚ್ಚರಿಕೆ ನೀಡಿದೆ. ಅಂತಾರಾಷ್ಟ್ರೀಯ ಕ್ರಿಮಿನಲ್ ಪೊಲೀಸ್ ಸಂಸ್ಥೆ ‘ಇಂಟರ್ಪೋಲ್’ ಈ ಕುರಿತು ಎಚ್ಚರಿಕೆಯ ಸಂದೇಶರವಾನಿಸಿದೆ. . ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಹೇಳಿ 194 ಸದಸ್ಯ ರಾಷ್ಟ್ರಗಳಿಗೆ ಆರೆಂಜ್ ನೋಟಿಸ್ ಕೂಡ ನೀಡಿದೆ.
ಅಧಿಕೃತ ಲಸಿಕೆಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆಯೇ ಜಾಹೀರಾತುಗಳ ಮೂಲಕ ಅಸಲಿ ಲಸಿಕೆಯನ್ನೇ ಹೋಲುವ ಲಸಿಕೆ ತಯಾರು ಮಾಡಿ ಜನರನ್ನು ಮರಳು ಮಾಡುವ ಹುನ್ನಾರ ನಡೆದಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. ಅಕ್ರಮ ಹಾಗೂ ನಕಲಿ ಲಸಿಕೆ ವ್ಯವಹಾರವನ್ನು ನಡೆಸುವ ಸಂಬಂಧ ಕೆಲವೊಂದು ಸಂಘಟಿತ ಕ್ರಿಮಿನಲ್ ನೆಟ್ವರ್ಕ್ಗಳು ಈಗಾಗಲೇ ಪ್ರಾರಂಭವಾಗಿವೆ.
ಆನ್ಲೈನ್ ಮೂಲಕ ಇವು ಜನರನ್ನು ಹಾದಿತಪ್ಪಿಸುವ ಎಲ್ಲಾ ಸಾಧ್ಯತೆಗಳು ಇವೆ. ಆದ್ದರಿಂದ ಪ್ರತಿಯೊಂದು ವೆಬ್ಸೈಟ್ಗಳ ಮೇಲೆ ಕಣ್ಣು ಇಡುವುದು ಅತ್ಯವಶ್ಯಕವಾಗಿದೆ. ನಕಲಿ ಉತ್ಪನ್ನಗಳು ಮಾರಾಟವಾಗುತ್ತಿವೆ ಎಂದು ಕಂಡುಬಂದ ತಕ್ಷಣ ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಕರೊನಾ ಲಸಿಕೆ ಎಂದು ತಿಳಿಯುವ ಜನರ ಪ್ರಾಣಕ್ಕೆ ಕುತ್ತಾಗಲಿವೆ ಈ ಲಸಿಕೆಗಳು ಎಂದು ಇಂಟರ್ಪೋಲ್ ತಿಳಿಸಿದೆ.
ಆನ್ಲೈನ್ ಲಸಿಕೆ ಮಾರಾಟ ಸಂಸ್ಥೆಗಳ ಜತೆ ಕೈಜೋಡಿಸಿ, ಜಾಗತಿಕವಾಗಿ ನಕಲಿ ಲಸಿಕೆ ಮಾರುತ್ತಿರುವ 3 ಸಾವಿರ ವೆಬ್ಸೈಟ್ಗಳ ಬಗ್ಗೆಯೂ ಇಂಟರ್ಪೋಲ್ ಎಚ್ಚರಿಸಿದೆ. ನಕಲಿ ಲಸಿಕೆ, ಕಳಪೆ ಮೆಡಿಕಲ್ ಡಿವೈಸ್ ಮಾರುವ ಈ ವೆಬ್ಸೈಟ್ಗಳಿಂದ ಗ್ರಾಹಕರಿಗೆ ಎದುರಾದ 1,700ಕ್ಕೂ ಅಧಿಕ ಸೈಬರ್ ಬೆದರಿಕೆಗಳನ್ನೂ ಸಂಸ್ಥೆ ಗಮನಿಸಿದೆ. ಈ ಸಂಬಂಧ ಇಂಟರ್ಪೋಲ್ ಜತೆಗೂಡಿ ಕಾರ್ಯನಿರ್ವಹಿಸುವ ಭಾರತದ ಸಿಬಿಐಗೂ ನೋಟಿಸ್ ನೀಡಲಾಗಿದ್ದು, ಇಂಥ ಜಾಲದ ಮೇಲೆ ಕಣ್ಣಿಡಲು ಸೂಚನೆಯನ್ನು ನೀಡಲಾಗಿದೆ.