ಬೆಂಗಳೂರು, ಜ. 15: ರಾಜ್ಯದಲ್ಲಿ ನಾಳೆಯಿಂದ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಕೋವಿಡ್ ಲಸಿಕೆ ವಿತರಣಾ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರು ಹೆಸರು ನೋಂದಣಿ ಸಮಯದಲ್ಲಿ ನೀಡಿದ ಗುರುತಿನ ಚೀಟಿ ತೋರಿಸಿದವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಶನಿವಾರದಿಂದ ಕೋವಿಡ್ ಲಸಿಕೆ ವಿತರಣೆ ಆರಂಭವಾಗಲಿದ್ದು, ಈಗಾಗಲೇ ಆನ್ ಲೈನ್ ನಲ್ಲಿ ಹೆಸರು ನೋಂದಾಯಿಸಿಕೊಂಡವರ ಮೊಬೈಲ್ ಸಂಖ್ಯೆಗೆ ನಿಗದಿತ ಸ್ಥಳ, ದಿನಾಂಕ ಹಾಗೂ ಸಮಯದ ಮಾಹಿತಿಯ ಸಂದೇಶ ಕಳುಹಿಸಲಾಗುತ್ತದೆ. ಅದರ ಅನುಸಾರ ಲಸಿಕೆ ಪಡೆಯಬೇಕು ಎಂದೂ ಆರೋಗ್ಯ ಇಲಾಖೆ ಹೇಳಿದೆ.
ಲಸಿಕೆ ಅಭಿಯಾನ ನಡೆಯುವ ಸ್ಥಳದಲ್ಲಿ ವ್ಯಕ್ತಿಯ ಭಾವಚಿತ್ರ ಇರುವ ಗುರುತಿನ ಚೀಟಿ ತೋರಿಸುವುದು ಕಡ್ಡಾಯವಾಗಿದೆ. ಅದನ್ನು ಕೇಂದ್ರದಲ್ಲಿನ ಸಿಬ್ಬಂದಿ ಪರಿಶೀಲನೆ ನಡೆಸಲಿದ್ದಾರೆ ಎಂದೂ ಇಲಾಖೆ ಮಾಹಿತಿ ನೀಡಿದೆ.