ಬೆಂಗಳೂರು ಅ 19 : ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಇದು ನಾನು ಹೇಳ್ತಾ ಇಲ್ಲ ಮಾಧ್ಯಮಗಳೇ ಇದನ್ನು ಹೇಳುತ್ತಿವೆ. ಇತಂಹ ರಾಹುಲ್ ಗಾಂಧಿಗೆ ಪಕ್ಷವನ್ನು ಸಂಭಾಳಿಸಲು ಆಗುತ್ತಿಲ್ಲ. ಸೋನಿಯಾ ಗಾಂಧಿಗೂ ಆಗುತ್ತಿಲ್ಲ. ಇತಂಹವರು ನಮ್ಮ ಪ್ರಧಾನಿ ಬಗ್ಗೆ ಟೀಕೆ ಮಾಡುತ್ತಾರೆ ಎಂದು ಬಿಜೆಪಿ ರಾಜಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಪರಿಷತ್ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ ಅನ್ನೋ ಮಂತ್ರ ಜಪಿಸಿದ್ರೆ. ಸಿದ್ದರಾಮಯ್ಯನವರು ಸಾಬ್ ಕಾ ಸಾಥ ಸಾಬ್ ಕಾ ವಿಕಾಸ ಅಂತಾ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಚಿಲ್ಲರೆ ರಾಜಕೀಯಕ್ಕೆ ಇಳಿದಿದ್ದಾರೆ. ಅವರಿಗೆ ಬಹುಸಂಖ್ಯಾತರ ವೋಟ್ ಸಿಗಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ RSSಗೆ ಬೈಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಅವರಿಗೆ RSS ಏನು ಅನ್ನೋದು ತಿಳಿಯಬೇಕು. ಮೊದಲು ಕುಮಾರಸ್ವಾಮಿ ಆರ್‍ಎಸ್‍ಎಸ್ ಶಾಖೆಗೆ ಅವರು ಬರಬೇಕು. ಅವರಿಗೆ ಈಗಾಗಲೇ ಕರೆ ಕೊಟ್ಟಿದ್ದೇವೆ. ಎರಡು ದಿನ ಶಾಖೆಗೆ ಬರಲಿ, ಶಾಖೆ ಅಂದರೆ ಏನು ಕಲಿಸುತ್ತದೆ ಅನ್ನೋದು ನೋಡಲಿ. ಅವರು ಜೀವನ ಪೂರ್ತಿ, ಅವರ ತಂದೆ ಕುಟುಂಬ ರಾಜಕಾರಣಿ ಮಾಡುತ್ತಾ ಬಂದಿದ್ದಾರೆ. ಅವರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೆಪಿಎಸ್‍ಸಿಯಿಂದ ಹಿಡಿದು, ಯಾವುದೇ ಇಲಾಖೆ ಗುಮಾಸ್ತನವರೆಗೆ ಅವರ ಕುಟುಂಬಸ್ಥರನ್ನ ಇಟ್ಟಿದ್ದಾರೆ. ಕುಟುಂಬ ರಾಜಕಾರಣಿ ಮಾಡುತ್ತ ಬಂದವರಿಗೆ ಎಲ್ಲವೂ ಹಾಗೇಯೆ ಕಾಣಿಸುತ್ತದೆ. ಹಳದಿ ರೋಗ ಬಂದವರಿಗೆ ಹಳದಿಯೇ ಕಾಣಿಸುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತವಲ್ಲದೇ ಪ್ರಪಂಚದ 150 ದೇಶದಲ್ಲಿ ಸೇವಾ ಕಾರ್ಯ ಮಾಡುತ್ತಿದೆ. ಸಂಘ ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಜಾಗೃತಿ ಮೂಡಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಮುಂದಿನ ಚುನಾವಣೆಗೆ ಒಟ್ಟಾಗಿ ಹೋಗಲ್ಲ. ಮುಂದಿನ ಚುನಾವಣೆ ವೇಳೆ ಕಾಂಗ್ರೆಸ್ ಎರಡು ಹೋಳಾಗಿ ಹೋಗುತ್ತದೆ. ಜೆಡಿಎಸ್ ಕುಂಟುಂಬ ರಾಜಕೀಯ ಮಾಡುತ್ತ ಹಾಳಾಗಿದೆ. ಹೀಗಾಗಿ ಮುಂದಿನ ಚುನಾವಣೆಗೆ ಎರಡು ಪಕ್ಷ ಹೋಗುತ್ತವೆ. ಮತ್ತೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಆಡಳಿತ ಜನರಿಗೆ ಮೆಚ್ಚುಗೆ ಸಿಕ್ಕಿದೆ. ಕಾಂಗ್ರೆಸ್ ಸಂವಿಧಾನದ ಮೇಲಿನ ನಂಬಿಕೆ ಕಳೆದುಕೊಂಡಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು