ಅರ್ಧ ಲೀಟರ್ (nandini curd price hike) ಮೊಸರಿಗೆ ₹6 ಹೆಚ್ಚಳ
ಒಂದು ಲೀಟರ್‌ಗೆ ಬರೋಬ್ಬರಿ ₹14 ಏರಿಕೆ
ನವೆಂಬರ್ 1ರಿಂದಲೇ ಹೊಸ ದರ ಜಾರಿ
Bengaluru : ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ (nandini curd price hike) ರಾಜ್ಯದ ಜನತೆಗೆ ನಂದಿನಿ ಮತ್ತೊಂದು ಶಾಕ್ ನೀಡಿದೆ.
ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮೊಸರಿನ ದರವನ್ನೂ ಪರಿಷ್ಕರಿಸಿದೆ. ನವೆಂಬರ್ 1ರಿಂದ ಹೊಸ ದರಗಳು ಜಾರಿಗೆ ಬರಲಿದ್ದು, ನಂದಿನಿ ಹಾಲು ಮತ್ತು ಮೊಸರು ಖರೀದಿಸುವ ಗ್ರಾಹಕರು ಇನ್ಮುಂದೆ ಹೆಚ್ಚುವರಿ ಹಣ ಪಾವತಿಸಬೇಕಾಗಿದೆ.

ರಾಜ್ಯ ಸಚಿವ ಸಂಪುಟದ ನಿರ್ಧಾರದಂತೆ ಕೆಎಂಎಫ್ ಶುಕ್ರವಾರ ಪರಿಷ್ಕೃತ ದರಗಳ (nandini curd price hike) ಕುರಿತು ಆದೇಶ ಹೊರಡಿಸಿದೆ. ಹಬ್ಬದ ಸಂಭ್ರಮದ ನಡುವೆಯೇ ಬೆಲೆ ಏರಿಕೆಯ ಹೊರೆ ಗ್ರಾಹಕರ ಕುಟುಂಬದ ಮಾಸಿಕ ಬಜೆಟ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಹೊಸ ದರದ ಪ್ರಕಾರ, ಅರ್ಧ ಲೀಟರ್ ನಂದಿನಿ ಮೊಸರಿನ ಬೆಲೆ ₹28ರಿಂದ ₹34ಕ್ಕೆ ಏರಿಕೆಯಾಗಿದೆ. ಅಂದರೆ ಅರ್ಧ ಲೀಟರ್ ಪ್ಯಾಕೆಟ್‌ಗೆ ₹6 ಹೆಚ್ಚುವರಿ ಪಾವತಿಸಬೇಕು. ಇನ್ನು ಒಂದು ಲೀಟರ್ ಮೊಸರಿನ ಬೆಲೆ ₹54ರಿಂದ ₹68ಕ್ಕೆ ಹೆಚ್ಚಳವಾಗಿದೆ. ಇದರಿಂದ ಪ್ರತಿ ಲೀಟರ್ ಮೊಸರಿಗೆ ಬರೋಬ್ಬರಿ ₹14 ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.
ಪ್ರತಿದಿನ ಮನೆಗಳಲ್ಲಿ ಮೊಸರು, ಮಜ್ಜಿಗೆ ಸೇರಿದಂತೆ ಹಾಲಿನ ಉತ್ಪನ್ನಗಳನ್ನು ಬಳಸುವ ಕುಟುಂಬಗಳಿಗೆ ಈ ದರ ಏರಿಕೆ ನೇರವಾಗಿ ತಟ್ಟಲಿದೆ. ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳು ದಿನನಿತ್ಯದ ಆಹಾರ ಪದಾರ್ಥಗಳ ಖರ್ಚನ್ನು ಮತ್ತೊಮ್ಮೆ ಲೆಕ್ಕ ಹಾಕಬೇಕಾದ ಪರಿಸ್ಥಿತಿ ಎದುರಾಗಿದೆ.
ಮೊಸರಿನ ಜೊತೆಗೆ ವಿವಿಧ ಮಾದರಿಯ ನಂದಿನಿ ಹಾಲಿನ ದರವನ್ನೂ ಹೆಚ್ಚಿಸಲಾಗಿದೆ. ಟೋನ್ಡ್ ಹಾಲಿನ ಬೆಲೆ ಲೀಟರ್‌ಗೆ ₹46ರಿಂದ ₹54ಕ್ಕೆ ಏರಿಕೆಯಾಗಿದೆ. ಹೋಮೋಜಿನೈಸ್ಡ್ ಟೋನ್ಡ್ ಹಾಲು ₹47ರಿಂದ ₹56ಕ್ಕೆ ಹೆಚ್ಚಳವಾಗಿದೆ. ಹೋಮೋಜಿನೈಸ್ಡ್ ಹಸುವಿನ ಹಾಲಿನ ದರ ₹50ರಿಂದ ₹58ಕ್ಕೆ ಪರಿಷ್ಕೃತಗೊಂಡಿದೆ.
ಸ್ಪೆಷಲ್ ಟೋನ್ಡ್ ಹಾಲು ಮತ್ತು ಶುಭಂ ಹಾಲಿನ ಬೆಲೆ ತಲಾ ₹52ರಿಂದ ₹64ಕ್ಕೆ ಏರಿಕೆಯಾಗಿದೆ. ಹೋಮೋಜಿನೈಸ್ಡ್ ಶುಭಂ (Homogenized Shubham) ಹಾಲಿನ ದರ ₹53ರಿಂದ ₹65ಕ್ಕೆ
ಹೆಚ್ಚಳವಾಗಿದೆ. ಹಾಲಿನಲ್ಲಿರುವ ಜಿಡ್ಡಿನಾಂಶದ ಪ್ರಮಾಣವನ್ನು ಆಧರಿಸಿ ವಿವಿಧ ಮಾದರಿಯ ಹಾಲು ಮತ್ತು ಮೊಸರಿನ ದರಗಳನ್ನು ಪರಿಷ್ಕರಿಸಲಾಗಿದೆ ಎಂದು ಕೆಎಂಎಫ್ ತಿಳಿಸಿದೆ.
ಇನ್ನು ಹಾಲಿನ ದರ ಏರಿಕೆಗೆ ಕಾರಣವೇನು ಎಂಬುದಕ್ಕೂ ಕೆಎಂಎಫ್ ವಿವರಣೆ ನೀಡಿದೆ. ರಾಜ್ಯದಲ್ಲಿ ಸುಮಾರು 26.89 ಲಕ್ಷ ಹೈನುಗಾರ ರೈತ ಸದಸ್ಯರಿದ್ದು, ಅವರಲ್ಲಿ 8.9 ಲಕ್ಷ ರೈತರು ಪ್ರತಿದಿನ ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿದ್ದಾರೆ.
ಪ್ರಸ್ತುತ ಹವಾಮಾನ ವೈಪರೀತ್ಯದಿಂದ ನೀರು ಮತ್ತು ಮೇವು ಕೊರತೆ ಉಂಟಾಗಿದ್ದು, ಪಶುಗಳ ನಿರ್ವಹಣೆ, ಔಷಧೋಪಚಾರ ಹಾಗೂ ಮೇವು ಖರೀದಿಗೆ ರೈತರು ಹೆಚ್ಚಿನ ಹಣ ವ್ಯಯಿಸಬೇಕಾಗಿದೆ. ಹೀಗಾಗಿ ಹಾಲು ಖರೀದಿ ದರವನ್ನು ಹೆಚ್ಚಿಸುವಂತೆ ರೈತರು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ ₹8 ಹೆಚ್ಚಿಸಲು ನಿರ್ಧರಿಸಲಾಗಿದ್ದು, ಪರಿಷ್ಕೃತ ಮೊತ್ತದಲ್ಲಿ ₹7 ಅನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಲು ಸೂಚಿಸಲಾಗಿದೆ ಎಂದು ಕೆಎಂಎಫ್ ಪ್ರಕಟಣೆ ತಿಳಿಸಿದೆ. ಪ್ರಸ್ತುತ ಹಾಲು ಉತ್ಪಾದಕರಿಗೆ ಪ್ರತಿದಿನ ಸರಾಸರಿ ₹28.60 ಕೋಟಿ ಪಾವತಿಸಲಾಗುತ್ತಿದೆ.
ಕಳೆದ ಐದು ದಶಕಗಳಿಂದ ‘ರೈತರಿಂದ, ರೈತರಿಗಾಗಿ ಮತ್ತು ರೈತರಿಗೋಸ್ಕರ’ ಎಂಬ ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಕೆಎಂಎಫ್, ಹೈನುಗಾರರ ಆರ್ಥಿಕ ಅಭಿವೃದ್ಧಿ ತನ್ನ ಪ್ರಮುಖ ಉದ್ದೇಶ ಎಂದು ಹೇಳಿದೆ.
ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಮತ್ತು ಹೈನುಗಾರಿಕೆ ಕ್ಷೇತ್ರವನ್ನು ಸುಸ್ಥಿರವಾಗಿ ಬೆಳೆಸುವುದು ಬೆಲೆ ಪರಿಷ್ಕರಣೆಯ ಹಿಂದಿನ ಉದ್ದೇಶವಾಗಿದೆ. ಆದರೆ ಮತ್ತೊಂದೆಡೆ ಗ್ರಾಹಕರಿಗೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹೊರೆ ಹೆಚ್ಚುತ್ತಿದೆ.
ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕು ಎನ್ನುವುದು ಎಷ್ಟು ಮುಖ್ಯವೋ, ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಹಾಲು ಮತ್ತು ಮೊಸರು ಲಭ್ಯವಾಗಬೇಕು ಎನ್ನುವುದೂ ಅಷ್ಟೇ ಮುಖ್ಯ. ನವೆಂಬರ್ 1ರಿಂದ ಜಾರಿಯಾಗಲಿರುವ ಹೊಸ ದರಗಳು ಗ್ರಾಹಕರ ಜೇಬಿನ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಲಿವೆ ಎಂಬುದನ್ನು ಕಾದು ನೋಡಬೇಕಿದೆ.