ಬೆಂಗಳೂರು, ಡಿ. 28: ನಾನು ದನದ ಮಾಂಸ ತಿನ್ನುತ್ತೇನೆ. ಆಹಾರ ಪದ್ಧತಿ ನನ್ನ ಹಕ್ಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‍ನ 136ನೇ ಸಂಸ್ಥಾಪನಾ ದಿನಾಚರಣೆಯಲ್ಲಿ
ಮಾತನಾಡಿದ ಅವರು, ದನದ ಮಾಂಸವನ್ನು ನಾನು ತಿನ್ನುತ್ತೇನೆ. ತಿನ್ನ ಬೇಡ ಅನ್ನೋಕೆ ನೀವ್ಯಾರು ಅಂತ ಸದನದಲ್ಲಿಯೇ ನಾನು ಪ್ರಶ್ನೆ ಮಾಡಿದ್ದೆ. ಈ ವಿಚಾರವನ್ನು ಯಾರು ಕೂಡ ಗಟ್ಟಿಯಾಗಿ ಹೇಳುವುದಿಲ್ಲ. ಆದರೆ, ನಾನು ಹೇಳುತ್ತೇನೆ ಎಂದರು.
ಗೋವುಗಳ ಸಂರಕ್ಷಣೆ ಕರಿತು ನಮಗೂ ಕಾಳಜಿ ಇದೆ. ರೈತರು ಮತ್ತು ಗೋವುಗಳ ಬಗ್ಗೆ ಕಾಳಜಿ ಇರುವುದರಿಂದಲೇ ಕಾಂಗ್ರೆಸ್ 1964ರಲ್ಲಿಯೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತು. ಆ ಕಾಯ್ದೆಯನ್ನು ಪರಿಷ್ಕರಣೆ ಮಾಡಿ ಇದೀಗ ಜಾರಿಗೆ ತರಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಹೊಸ ಕಾಯ್ದೆ ಜಾರಿಗೆ ಬಂದರೆ ಮುದಿ ಹಸು, ಎತ್ತು, ಕೋಣಗಳನ್ನು ಸಾಕಲಾಗದ ರೈತರು ಏನು ಮಾಡಬೇಕು. ಇವುಗಳನ್ನು ಸಾಕಲು ದಿನವೊಂದಕ್ಕೆ 100 ರೂ. ಅವಶ‍್ಯಕತೆ ಇದೆ. ಒಂದುವೇಳೆ ನೂತನ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದರೆ ಜಾನುವಾರಗಳ ನಿರ್ವಹಣೆ ವಿಚಾರದಲ್ಲಿ ರೈರು ಸಾಕಷ್ಟು ಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.