ಬೆಂಗಳೂರು, ನ. 29: ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದರು.
ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಈಗಾಗಲೇ ನನ್ನ ಎಂಎಲ್ಸಿ ಮಾಡಿದೆ, ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ. ಯಾವುದೇ ಕಾಂಟ್ರವರ್ಸಿ ಮಾಡಿಕೊಳ್ಳಲು ಇಷ್ಟಪಡಲ್ಲ. ಸಚಿವ ಸ್ಥಾನ ನೀಡುವುದು ಸಿಎಂ ಹಾಗೂ ವರಿಷ್ಠರ ವಿವೇಚನೆಗೆ ಬಿಟ್ಟಿದ್ದು, ನಾನು ನನ್ನ ಪಾಡಿಗೆ ಇದ್ದೇನೆ, ನಾನೇನೂ ಬಹಳ ಒತ್ತಡ ಹಾಕಿಲ್ಲ ಎಂದರು.
ಮಂತ್ರಿ ಮಾಡೋದು, ಬಿಡುವುದು ಸೇರಿ ಪಕ್ಷ ಯಾವುದಾದರೂ ಜವಾಬ್ದಾರಿ ಕೊಡುವುದು ಪಕ್ಷಕ್ಕೆ ಬಿಟ್ಟಿದ್ದು. ವೈಯಕ್ತಿಕ ಅಭಿಪ್ರಾಯಕ್ಕಿಂತ ಪಕ್ಷದ ಅಭಿಪ್ರಾಯ ಮುಖ್ಯವಾಗಲಿದೆ. ನನಗೆ ಸಚಿವ ಸ್ಥಾನ ಕೊಡಬಾರದು ಎಂಬುದಕ್ಕೆ ನಾನೇನೂ ಹೇಳಲ್ಲ. ನನ್ನ ಟಾರ್ಗೆಟ್ ಮಾಡಿದ್ದಾರಾ ಅಂತಾನೂ ಗೊತ್ತಿಲ್ಲ. ಸಚಿವ ಸ್ಥಾನ ಕೊಡದಿದ್ದರೂ ಪರವಾಗಿಲ್ಲ, ವಿರೋಧ ಮಾಡುವವರಿಗೆ ನಾನು ಏನೂ ಹೇಳಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿದ್ದೇನೆ, ಪಕ್ಷ ಏನಾದರೂ ಅವಕಾಶ ಕೊಟ್ಟರೆ ಬೇಡ ಅಂತಾ ಹೇಳಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.