ಪಾಟ್ನಾ : ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ(Central Government) ಇದೀಗ ಅಗ್ನಿಪಥ್ ಎಂಬ ವಿಶೇಷ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಭಾರತೀಯ ಸೇನೆಯಲ್ಲಿ ಸೇವೆಯಲ್ಲಿಸಬೇಕೆಂದು ಕನಸು ಕಾಣುತ್ತಿರುವ ಅನೇಕ ಯುವಜನತೆಗೆ ಈ ಯೋಜನೆ ನೆರವಾಗಲಿದೆ. ಈ ಯೋಜನೆಯಡಿ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸುವ ಕನಸು ಕಾಣುತ್ತಿದ್ದವರಿಗೆ 4 ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಲು ಯೋಜಿಸಲಾಗಿದೆ.
ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಯ ಒಪ್ಪಂದದ ಮೇಲೆ ಸೈನಿಕರನ್ನು ಸೇರ್ಪಡೆಗೊಳಿಸುವ ಸರ್ಕಾರದ ಅಗ್ನಿಪಥ್ ಯೋಜನೆಗೆ ಅಸಮಾಧಾನ ವ್ಯಕ್ತಪಡಿಸಿದ ಸೇನಾ ಆಕಾಂಕ್ಷಿಗಳು ಬುಧವಾರ ಬಿಹಾರದಲ್ಲಿ ವಿಶೇಷವಾಗಿ ಮುಜಾಫರ್ಪುರದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದ್ದಾರೆ. ಆಕಾಂಕ್ಷಿಗಳು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಿಂದ ಅಧಿಕೃತವಾಗಿ ಹೊರಡಿದ ಘೋಷಣೆಯ ನಂತರ ಈ ಯೋಜನೆಯನ್ನು ತಮ್ಮ ದೀರ್ಘಾವಧಿಯ ಭವಿಷ್ಯಕ್ಕೆ ಹಾನಿಕಾರಕವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏಕೆಂದರೆ ಯೋಜನೆಯಡಿಯಲ್ಲಿ ನೇಮಕಾತಿ ಅಥವಾ ಅಗ್ನಿವೀರ್ಗಳಲ್ಲಿ ಕೇವಲ 25 ಪ್ರತಿಶತದಷ್ಟು ಮಾತ್ರ ನಿಯಮಿತ ಕಮಿಷನ್ ಪಡೆಯಬಹುದು. ಪಾಟ್ನಾದಲ್ಲಿಯೂ ಸಹ, ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿರುವ ಯುವಕರು ಯೋಜನೆಯ ಅಂಶಗಳನ್ನು ಟೀಕಿಸಿದರು. ಕೆಲವರು ಇದನ್ನು “ಯುವಕರನ್ನು ಮರುಳು ಮಾಡುವ ತಂತ್ರ” ಎಂದು ಕರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.