ನಾನು ‘ನೀಚ ಜಾತಿಯವಳು’ ಎಂಬ ಕಾರಣದಿಂದ ನನಗೆ ಜೈಲಿನಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳಾದ ನೀರು(Water) ಮತ್ತು ಶೌಚಾಲಯ(Toilet) ಬಳಸಲು ಅವಕಾಶ ನೀಡಲಿಲ್ಲ ಎಂದು ಮಹಾರಾಷ್ಟ್ರದ(Maharashtra) ಅಮರಾವತಿ ಲೋಕಸಭಾ(Amaravathi Loksabha) ಕ್ಷೇತ್ರದ ಪಕ್ಷೇತರ ಸಂಸದೆ ನವನೀತ್ ರಾಣಾ(Navneeth Rana) ಆರೋಪಿಸಿದ್ದಾರೆ.

ಹನುಮಾನ್ ಚಾಲೀಸ್ ಪಠಣ ವಿವಾದದ ಕಾರಣ ಬಂಧನಕ್ಕೀಡಾಗಿರುವ ಸಂಸದೆ ನವನೀತ್ ರಾಣಾ ಅವರನ್ನು ಬಾಂದ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಜೈಲಿನಲ್ಲಿ ನನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಒರ್ವ ನಾಗರಿಕಳಾಗಿ ನನಗೆ ಸಿಗಬೇಕಾದ ಹಕ್ಕುಗಳನ್ನು ನೀಡುತ್ತಿಲ್ಲ. ರಾತ್ರಿ ವೇಳೆ ಶೌಚಾಲಯ ಬಳಸಲು ಅನುಮತಿ ಹೇಳಿದರೆ, ನೀಚ ಜಾತಿಯವಳಾದ ಕಾರಣ ನಮ್ಮ ಶೌಚಾಲಯಗಳನ್ನು ನಿನಗೆ ಬಳಸಲು ಬೀಡುವುದಿಲ್ಲ ಎಂದು ಜೈಲು ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಜೈಲು ಸಿಬ್ಬಂದಿ ನನ್ನ ಮೂಲಭೂತ ಬೇಡಿಕೆಗಳ ಕಡೆಗೂ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿ ಇ-ಮೇಲ್ ಮೂಲಕ ಪತ್ರವವೊಂದನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದಿದ್ದಾರೆ.
ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ಕುರಿತು ವರದಿ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ಖಾಸಗಿ ನಿವಾಸ ‘ಮತೋಶ್ರೀ’ ಮುಂದೆ ಹನುಮಾನ್ ಚಾಲೀಸ್ ಪಠಣ ಮಾಡೋದಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆ, ಅವರ ಈ ಹೇಳಿಕೆಯೂ ಶಾಂತಿ ಮತ್ತು ಸುವ್ಯವಸ್ಥೆಗೆ ಬೆದರಿಕೆಯಾಗಿತ್ತು.

ಹೀಗಾಗಿ ಅವರನ್ನು ಬಂಧಿಸಿದ್ದೇವೆ ಎಂದು ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ. ಇನ್ನು ತಮ್ಮನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ, ಹೀಗಾಗಿ ನಮ್ಮನ್ನು ಬಿಡುಗಡೆ ಮಾಡಬೇಕೆಂದು ಕೋರಿ ರಾಣಾ ದಂಪತಿ ಸಲ್ಲಿಸಿರುವ ಅರ್ಜಿಯನ್ನು ಮಹಾರಾಷ್ಟ್ರ ಹೈಕೋರ್ಟ್ ತಿರಸ್ಕರಿಸಿದೆ. ಈ ನಡುವೆ ಸಂಸದೆ ನವನೀತ್ ರಾಣಾ ಬಂಧನ ಕುರಿತು ಸಂಸತ್ತಿಗೆ ವರದಿ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಲೋಕಸಭಾ ಸ್ಪೀಕರ್ ಸೂಚನೆ ನೀಡಿದ್ದಾರೆ.