ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಸಾಕು ಅಂತ ಕಾಯುತ್ತಿರುತ್ತಾರೆ. ಪರೀಕ್ಷೆ ಮುಗಿದ ತಕ್ಷಣ ರಿಲ್ಯಾಕ್ಸ್ ಆಗುತ್ತಾರೆ ಮತ್ತು ಟೆನ್ಷನ್ ಫ್ರೀ ಆಗುತ್ತಾರೆ. ಈ ಸಬ್ಜೆಕ್ಟ್ ಗಳನ್ನ ಓದೋದು, ಪರೀಕ್ಷೆ ಬರೆಯೋದು ಮುಗಿಯಿತು ಎಂದು ಖುಷಿ ಪಡುತ್ತಾರೆ. ಹೀಗಿರುವಾಗ ಜೆಇಇ ಟಾಪರ್(JEE Topper) ಆದ ರಾಜಸ್ಥಾನದ(Rajasthan) ನವ್ಯಾ ಹಿಸಾರಿಯಾ(Navya Hisaria) ವಿಭಿನ್ನ ಯೋಜನೆಯನ್ನು ಹೊಂದಿದ್ದಾರೆ. ಜೆಇಇ ಮೇನ್ ಸೀಸನ್ 1 ರಲ್ಲಿ 300 ಕ್ಕೆ 300 ಅಂಕ ಗಳಿಸಿದ್ದ ಹಿಸಾರಿಯಾ, ಮತ್ತೊಮ್ಮೆ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ!
ಇದೆಂಥಾ ವಿಚಿತ್ರ ಎಂಬ ಪ್ರಶ್ನೆ ಅನೇಕರಿಗೆ ಕಾಡುವುದಂತೂ ಸರ್ವೆ ಸಾಮಾನ್ಯ ಆದ್ರೆ ಇದು ನಿಜವೇ. ಪರೀಕ್ಷೆಯಲ್ಲಿ ಪೂರ್ಣ ಅಂಕಗಳನ್ನು ಪಡೆದರೂ ತೃಪ್ತನಾಗದ ನವ್ಯಾ ಹಿಸಾರಿಯಾ ಅವರ ಈ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ. ಆದರೆ ತನ್ನ ನಿರ್ಧಾರಕ್ಕೆ ಕಾರಣವನ್ನೂ ಈತ ನೀಡಿದ್ದಾನೆ. ರಾಜಸ್ಥಾನದ JEE ಟಾಪರ್ ನವ್ಯಾ ಪ್ರಕಾರ, ಪರೀಕ್ಷೆಯಲ್ಲಿ ಒಟ್ಟು 300 ರಲ್ಲಿ 300 ಅಂಕಗಳನ್ನು ಪಡೆದಿರುವುದು ಬಹಳ ಸಂತೋಷದ ವಿಷಯ. ಇದಾದ ನಂತರವೂ ಮತ್ತೆ ಅಭ್ಯಾಸ ಮಾಡುವ ಉದ್ದೇಶದಿಂದ ಜೆಇಇ ಪ್ರವೇಶ ಪರೀಕ್ಷೆಯನ್ನು ಬರೆಯುವುದಾಗಿ ಹೇಳಿದ್ದಾರೆ. ಇದರಿಂದ ಸಮಯ ನಿರ್ವಹಣೆ ಸುಧಾರಿಸುತ್ತದೆ ಎನ್ನುವುದು ನವ್ಯಾ ಅಭಿಪ್ರಾಯ.
ಜೆಇಇ ಪರೀಕ್ಷೆಯಿಂದ ತನಗೆ ಸಮಯ ನಿರ್ವಹಣೆ ಉತ್ತಮವಾಗಿ ಮಾಡುವುದು ಹೇಗೆ ಎಂದು ತಿಳಿಯಿತು ಎನ್ನುವುದು ಈ ಟಾಪರ್ ಅಭಿಪ್ರಾಯ. ಮತ್ತೆ ಪರೀಕ್ಷೆ ನೀಡುವುದರಿಂದ ವಿಷಯ ಜ್ಞಾನ ಹೆಚ್ಚಾಗುವುದರ ಜೊತೆ ಸಮಯ ನಿರ್ವಹಣೆ ಕೌಶಲ್ಯವೂ ಸುಧಾರಿಸುತ್ತದೆ ಎಂದು ಹೇಳುತ್ತಾರೆ. ಅಂದಹಾಗೆ, ಎರಡನೇ ಪ್ರಯತ್ನದಲ್ಲಿ ನವ್ಯಾಗೆ ಫುಲ್ ಮಾರ್ಕ್ಸ್ ಬರದಿದ್ದರೂ ಅವರಿಗೇನೂ ನಷ್ಟವಿಲ್ಲ. ಏಕೆಂದರೆ, ಅವರ ಎರಡೂ ಪರೀಕ್ಷೆಗಳ ಫಲಿತಾಂಶದಲ್ಲಿ ಉತ್ತಮವಾದದ್ದನ್ನು ಮಾತ್ರ ಪರಿಗಣಿಸಲಾಗುತ್ತದೆ. ಇನ್ನು, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯ ಸ್ಪರ್ಧಾತ್ಮಕ ಕಂಪ್ಯೂಟರ್ ವಿಜ್ಞಾನ ವಿಭಾಗಕ್ಕೆ ಸೇರುವುದು ನವ್ಯಾ ಕನಸಾಗಿದೆ.
ನವ್ಯಾ ಹಿಸಾರಿಯಾ ಅವರ ಕುಟುಂಬದ ಬಗ್ಗೆ ತಿಳಿಯುವುದಾದರೆ, ಅವರ ತಂದೆ ರಾಕೇಶ್ ಚಂದ್ರ ಹಿಸಾರಿಯಾ ಉದ್ಯಮಿ ಮತ್ತು ತಾಯಿ ಪೂನಂ ಹಿಸಾರಿಯಾ ಗೃಹಿಣಿ. ನವ್ಯಾ 10ನೇ ತರಗತಿಯಲ್ಲಿ ಶೇ 97.40 ಅಂಕ ಪಡೆದಿದ್ದರು. ಅಲ್ಲದೆ ಕಿಶೋರ್ ವೈಜ್ಞಾನಿಕ ಪ್ರೋತ್ಸಾಹ ಯೋಜನೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 13ನೇ ರ‍್ಯಾಂಕ್ ಪಡೆದಿದ್ದಾರೆ. ಇದಲ್ಲದೆ ರಾಷ್ಟ್ರೀಯ ಮಟ್ಟದ ಭೌತಶಾಸ್ತ್ರ ಒಲಿಂಪಿಯಾಡ್‌ಗೂ ಅರ್ಹತೆ ಕೂಡ ಪಡೆದಿದ್ದಾರೆ.
- ಪವಿತ್ರ