- ಜೆನ್ ಜೆಡ್ ಪ್ರತಿಭಟನೆಗೆ ಮಣಿದ ನೇಪಾಳ
- 19 ಜನರ ಸಾವಿನ ಬಳಿಕ ತುರ್ತು ನಿರ್ಧಾರ (Nepal government lifts ban on social media)
- ಭ್ರಷ್ಟಾಚಾರ ವಿರೋಧಿಸಿ, ಸಾಮಾಜಿಕ ಜಾಲತಾಣಗಳಲ್ಲ ಎಂದ ಯುವಜನತೆಯ ಮಾತಿಗೆ ಒಪ್ಪಿಗೆ ನೀಡಿದ ಸರ್ಕಾರ
Nepal: ನೇಪಾಳದಲ್ಲಿ ಕಳೆದ ವಾರ ಜಾರಿಗೊಂಡಿದ್ದ ಸೋಶಿಯಲ್ ಮೀಡಿಯಾ(Social media) ಮೇಲಿನ ನಿಷೇಧ ಕೊನೆಗೂ ಹಿಂತೆಗೆದುಕೊಳ್ಳಲಾಗಿದೆ. ಯುವಜನತೆ,
ವಿಶೇಷವಾಗಿ ಜೆನ್ ಜೆಡ್ ಸಮುದಾಯದವರು ಈ ನಿರ್ಧಾರದ ವಿರುದ್ಧ ಬೀದಿಗಿಳಿದು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 19 ಮಂದಿ ಸಾವಿಗೀಡಾದ ನಂತರ, ಸರ್ಕಾರ ತುರ್ತು ಸಭೆ ನಡೆಸಿ
ನಿರ್ಬಂಧವನ್ನು ಹಿಂಪಡೆಯುವ ಘೋಷಣೆ ಮಾಡಿದೆ.ಸರ್ಕಾರವು ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಹೊಸ ನಿಯಮದಡಿ ಕಡ್ಡಾಯ ನೋಂದಣಿ ಮಾಡಲು ಗಡುವು ನೀಡಿತ್ತು. ಗಡುವು ಮುಗಿದರೂ ಕಂಪನಿಗಳು
ಪಾಲನೆ ಮಾಡದ ಹಿನ್ನೆಲೆಯಲ್ಲಿ ಮೆಟಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಆಲ್ಫಾಬೆಟ್‌ನ ಯೂಟ್ಯೂಬ್, ಚೀನಾದ ಟೆನ್ಸೆಂಟ್, ಸ್ನ್ಯಾಪ್‌ಚಾಟ್, ಪಿನ್‌ಟರೆಸ್ಟ್ ಮತ್ತು ಎಕ್ಸ್ ಸೇರಿದಂತೆ ಹಲವು ವೇದಿಕೆಗಳ ಮೇಲೆ ನಿರ್ಬಂಧ ಹೇರಲಾಗಿತ್ತು.
ಸರ್ಕಾರದ ಪ್ರಕಾರ, ಈ ಜಾಲತಾಣಗಳನ್ನು ಕೆಲವರು ನಕಲಿ ಖಾತೆಗಳನ್ನು(fake accounts) ತೆರೆಯಲು, ದ್ವೇಷ ಭಾಷಣ ಹಬ್ಬಿಸಲು, ನಕಲಿ ಸುದ್ದಿಗಳನ್ನು(fake news) ಹರಡಲು ಹಾಗೂ ವಂಚನೆಗೆ(Fraud) ಬಳಸುತ್ತಿದ್ದರು.
ಆದರೆ ಯುವಕರು ಬೇರೆ ಅಭಿಪ್ರಾಯ ಹೊಂದಿದ್ದರು. ಅವರ ಅಭಿಮತದಲ್ಲಿ, ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ನಿಲ್ಲಿಸಬೇಕೇ ಹೊರತು, ಜನರ ಧ್ವನಿಯ ವೇದಿಕೆಗಳನ್ನು ಮುಚ್ಚುವುದು ಸಮಸ್ಯೆಗೆ ಪರಿಹಾರವಲ್ಲ ಎಂಬುದಾಗಿತ್ತು.

ಹಾಗಾಗಿ ಸೋಶಿಯಲ್ ಮೀಡಿಯಾ ಬ್ಯಾನ್‌ನ ವಿರುದ್ಧ ಸಾವಿರಾರು ಯುವಕರು ಕಠ್ಮಂಡುವಿನ(Kathmandu) ಬೀದಿಗಳಲ್ಲಿ ಇಳಿದರು.
ಸಂಸತ್ ಕಟ್ಟಡದತ್ತ(Parliament building) ಮೆರವಣಿಗೆ ನಡೆಸಿದಾಗ ಪೊಲೀಸರು ತಡೆಯಲು ಪ್ರಯತ್ನಿಸಿದರು.
ಪ್ರತಿಭಟನಾಕಾರರು ಬ್ಯಾರಿಕೇಡ್ ಮುರಿಯಲು ಮುಂದಾದಾಗ ಪರಿಸ್ಥಿತಿ ನಿಯಂತ್ರಣ ತಪ್ಪಿತು. ಪೊಲೀಸರು ಜಲ ಫಿರಂಗಿ, ಲಾಠಿ ಚಾರ್ಜ್ ಮತ್ತು ರಬ್ಬರ್ ಗುಂಡುಗಳನ್ನು ಬಳಸಿದರು.
ಈ ಸಂಘರ್ಷದಲ್ಲಿ ಒಟ್ಟು 19 ಜನರು ಮೃತಪಟ್ಟರೆ, ನೇಪಾಳದಲ್ಲಿ ನಡೆದ ಗಲಭೆಯಲ್ಲಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ಮತ್ತಷ್ಟು ತೀವ್ರವಾಗುತ್ತಿದ್ದಂತೆ,
ನೈತಿಕ ಹೊಣೆಗಾರಿಕೆಯನ್ನು ಸ್ವೀಕರಿಸಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ(K.P. Sharma Oli) ನೇತೃತ್ವದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ನೇಪಾಳಿ ಕಾಂಗ್ರೆಸ್‌ನ ಗೃಹ ಸಚಿವ ರಮೇಶ್ ಲೇಖಕ್(Ramesh Lekhak) ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಇದಕ್ಕೆ ತದನಂತರ ಉದ್ವಿಗ್ನತೆ ಹೆಚ್ಚಿದ ಕಾರಣದಿಂದಾಗಿ ಕಠ್ಮಂಡುವಿನಲ್ಲಿ ಸೇನೆ ನಿಯೋಜಿಸಲಾಯಿತು. ನ್ಯೂ ಬನೇಶ್ವರ್ ಪ್ರದೇಶದಲ್ಲಿರುವ ಸಂಸತ್ ಸಂಕೀರ್ಣದ(Parliament complex) ಸುತ್ತಮುತ್ತಲಿನ ರಸ್ತೆಗಳನ್ನೂ ಸೇನಾಪಡೆ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಈ ಪ್ರತಿಭಟನೆಯ ಮುಂಚೂಣಿಯಲ್ಲಿ ಇದ್ದವರು “ಜೆನ್ ಜೆಡ್” ತಲೆಮಾರಿನ ಯುವಕರು. 1996ರಿಂದ 2010ರ ನಡುವೆ ಜನಿಸಿದವರನ್ನು ಈ ಶ್ರೇಣಿಯಲ್ಲಿ ಪರಿಗಣಿಸಲಾಗುತ್ತದೆ. ಸಾಮಾಜಿಕ ಬದಲಾವಣೆಗೆ,
ಸ್ವಾತಂತ್ರ್ಯಕ್ಕೆ ಹಾಗೂ ಡಿಜಿಟಲ್ ಹಕ್ಕುಗಳಿಗೆ(Digital rights) ಹೆಚ್ಚು ಒತ್ತಾಯ ಮಾಡುವ ಈ ಪೀಳಿಗೆ, ಸರ್ಕಾರದ ನಿರ್ಧಾರದ ವಿರುದ್ಧ ಗಟ್ಟಿಯಾಗಿ ನಿಂತರು.
ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪೃಥ್ವಿ ಸುಬ್ಬ ಗುರುಂಗ್(Prithvi Subba Gurung) ಅವರ ಪ್ರಕಾರ,ಸರ್ಕಾರವು ಯುವಕರ ಆಕ್ರೋಶವನ್ನು ಮನಗಂಡು ತಕ್ಷಣ ನಿರ್ಧಾರವನ್ನು ಪರಿಷ್ಕರಿಸಿದೆ.
ಈಗ ಪ್ರತಿಭಟನೆಗಳನ್ನು ಹಿಂತೆಗೆದುಕೊಳ್ಳುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಇನ್ನು ಪ್ರಧಾನಿ ಕೆ.ಪಿ. ಶರ್ಮಾ ಓಲಿ ತಮ್ಮ ಮಾತಿನಲ್ಲಿ, “ಎಕ್ಸ್” ಸೇರಿದಂತೆ ಕೆಲವು ಸೋಶಿಯಲ್ ಮೀಡಿಯಾ ವೇದಿಕೆಗಳು ನೇಪಾಳದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದವು.
ಸರ್ಕಾರವು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಈ ಸಂಸ್ಥೆಗಳನ್ನು ಕಾನೂನು ಪಾಲನೆಗೆ ಮನವಿ ಮಾಡಿತ್ತು. ಆದರೆ ಅವು ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ನಿಷೇಧ ಅನಿವಾರ್ಯವಾಗಿತ್ತು,” ಎಂದು ತಿಳಿಸಿದರು.
ಆದರೆ ಪ್ರತಿಭಟನೆಗಳ ತೀವ್ರತೆ, ಜನರ ಜೀವಹಾನಿ ಮತ್ತು ದೇಶಾದ್ಯಂತ ಉಂಟಾದ ಅಶಾಂತಿ ಗಮನಿಸಿ, ಸರ್ಕಾರ ನಿರ್ಬಂಧವನ್ನು ಹಿಂತೆಗೆದುಕೊಂಡಿದೆ.
ಈ ನಿರ್ಧಾರ ತಡರಾತ್ರಿ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯಿತು.
ಪ್ರತಿಭಟನೆ ಹೇಗೆ ಹಿಂಸಾಚಾರಕ್ಕೆ ತಿರುಗಿತು ಎಂಬುದನ್ನು ತಿಳಿದುಕೊಳ್ಳಲು ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದೆ. 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಇದನ್ನು ಓದಿ : ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ: ಉದ್ವಿಗ್ನ ವಾತಾವರಣ
ಸರ್ಕಾರದ ನಿಲುವಿನಲ್ಲಿ ಸೋಶಿಯಲ್ ಮೀಡಿಯಾ ದುರುಪಯೋಗವನ್ನು ತಡೆಯುವುದು ಮುಖ್ಯ, ಆದರೆ ಜನರ ಭಾವನೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. (Nepal government lifts ban on social media)