Bengaluru: ಕಳೆದ ಕೆಲ ದಿನಗಳಿಂದ ಆಟೋ (Auto) ಬಾಡಿಗೆ ದರ ಪರಿಷ್ಕರಣೆ ಮಾಡುವಂತೆ ಚಾಲಕರ ಒತ್ತಾಯ ಮಾಡಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರ ಆಟೋಗಳ ಸಂಖ್ಯೆಯನ್ನೇ ಹೆಚ್ಚಳ ಮಾಡಲು ತೀರ್ಮಾನಿಸಿದೆ. ಅದರಂತೆ ನಗರದಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಒಂದು ಲಕ್ಷ ಆಟೋಗಳು ರಸ್ತೆಗಿಳಿಯಲಿದೆ.

ಈಗಾಗಲೇ ಮಹಾನಗರಿ ಬೆಂಗಳೂರಲ್ಲಿ (Bengaluru) 1.55 ಲಕ್ಷ ಆಟೋಗಳಿದ್ದು, ಇನ್ನೂ ಒಂದು ಲಕ್ಷ ಆಟೋಗಳಿಗೆ ಸಾರಿಗೆ ಇಲಾಖೆ ಪರ್ಮಿಟ್ ನೀಡಲು ನಿರ್ಧರಿಸಿದೆ. ಇದರೊಂದಿಗೆ ನಗರದಲ್ಲಿ ಆಟೋಗಳ ಸಂಖ್ಯೆ ಈಗಿರುವುದಕ್ಕಿಂತ ಶೇ.65ರಷ್ಟು ಹೆಚ್ಚಳವಾಗಲಿದೆ .
ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಮುಂದಿನ 5 ವರ್ಷಗಳಲ್ಲಿ ಈ ಒಂದು ಲಕ್ಷ ಹೊಸ ಆಟೋರಿಕ್ಷಾ ಪರ್ಮಿಟ್ ನೀಡಲಾಗುವುದು. ಇದರಿಂದ ಪ್ರಸ್ತುತ ಇರುವ 1,55,000 ಆಟೋರಿಕ್ಷಾ ಪರ್ಮಿಟ್ ಮಿತಿ 2,55,000ಕ್ಕೆ ಹೆಚ್ಚಳ ಆಗಲಿದೆ. ಈ ಸಂಬಂಧ ಶನಿವಾರ ಅಧಿಸೂಚನೆ ಹೊರಡಿಸಲಾಗಿದೆ.

ಬೆಂಗಳೂರು ನಗರದಲ್ಲಿ ಜನದಟ್ಟಣೆ ಗರಿಷ್ಟ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆ ಹೊಸ ಆಟೋ ಪರ್ಮಿಟ್ಗಳಿಗಾಗಿನ ಬೇಡಿಕೆ ಹೆಚ್ಚಾಗುತ್ತಿದೆ. ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಜೊತೆಗೆ ನಗರದಲ್ಲಿನ ವಾಯು ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಎಲ್‌ಪಿಜಿ/ಸಿಎನ್ಜಿ (LPG/CNG) ಆಟೋ ರಿಕ್ಷಾಗಳನ್ನು ರಸ್ತೆಗಿಳಿಸುವುದು ಮುಖ್ಯವಾಗಿದೆ ಎಂದು ಸಾರಿಗೆ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
ಹೊಸ ಆಟೋ ಹೊಂದಲು ಇರುವ ಷರತ್ತುಗಳು:
- ಎಲ್‌ಪಿಜಿ/ ಸಿಎನ್ಜಿ/ ಎಲೆಕ್ಟ್ರಿಕ್ ಕಿಟ್ (Electric Kit) ಹಾಗೂ ಡಿಜಿಟಲ್ ದರ ಮೀಟರ್ ನೊಂದಿಗೆ ಬಿಎಸ್ VI ನಾಲ್ಕು ಸ್ಟ್ರೋಕ್ ಇಂಜಿನ್ನ ಹಸಿರು ಆಟೋ ರಿಕ್ಷಾಗಳಿಗೆ ಮಾತ್ರ ಪರ್ಮಿಟ್ ನೀಡಲಾಗುತ್ತದೆ.
- ಈಗಾಗಲೇ ಆಟೋ ರಿಕ್ಷಾ ಪರ್ಮಿಟ್ (Auto Rikshaw Permit) ಹೊಂದಿದ ವ್ಯಕ್ತಿಗೆ ಹೊಸ ಪರ್ಮಿಟ್ ನೀಡಲಾಗುವುದಿಲ್ಲ.
- ಪರ್ಮಿಟ್ ಕೋರಿ ಅರ್ಜಿ ಸಲ್ಲಿಸುವವರು ಆಧಾರ್ ಕಾರ್ಡ್ (Aadhar Card) ಅಥವಾ ವೋಟರ್ ಐಡಿ ಅಥವಾ ರೇಷನ್ ಕಾರ್ಡ್ ಅಥವಾ ಪಾನ್ ಕಾರ್ಡ್ ಸಲ್ಲಿಕೆ ಮಾಡಬೇಕು.
- ಪರ್ಮಿಟ್ ಕೋರಿ ಅರ್ಜಿ ಹಾಕುವ ವ್ಯಕ್ತಿ ಎಲ್‌ಪಿಜಿ/ಸಿಎನ್ಜಿ/ವಿದ್ಯುತ್ ಚಾಲಿತ ಆಟೋ ರಿಕ್ಷಾ ಓಡಿಸುವ ಡಿಎಲ್ (DL) ಹೊಂದಿರಬೇಕು ಎಂದು ಆದೇಶ ಹೊರಡಿಸಲಾಗಿದೆ.