- ಪೊಲೀಸರ ದರ್ಪದ ಕುರಿತಾಗಿ ಸಾರ್ವಜನಿಕರಿಂದ ಆರೋಪ
- ಸಂಯಮ ಹಾಗೂ ತಾಳ್ಮೆಯಿಂದ ವರ್ತಿಸಲು ಪೊಲೀಸರಿಗೆ ಡಿಜಿ ಮತ್ತು ಐಜಿಪಿ ಎಂಎ ಸಲೀಂ ಮಹತ್ವದ ಸೂಚನೆ
- ಸಾರ್ವಜನಿಕರ ಕುಂದುಕೊರತೆ ತಾಳ್ಮೆಯಿಂದ ಆಲಿಸಿ ಕಾನೂನಿನ ಪ್ರಕಾರ ಕಾಲವಿಳಂಬವಿಲ್ಲದೇ ದೂರು ದಾಖಲಿಸಲು ಮನವಿ
Bengalore: ಕಳೆದ ಕೆಲ ದಿನಗಳಿಂದ ಪೊಲೀಸರ ನಡವಳಿಕೆ ಕುರಿತು ಸಾರ್ವಜನಿಕರಿಂದ ಅನೇಕ ದೂರುಗಳು, ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ (M.A. Salim) ಅವರು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. (new guidelines for state police)
ಈ ಸೂಚನೆಗಳ ಉದ್ದೇಶ, ಪೊಲೀಸರ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸದ ಸೇತುವೆ ನಿರ್ಮಿಸಿ, ಪಾರದರ್ಶಕ ಮತ್ತು ಮಾನವೀಯ ಪೊಲೀಸ್ (Police) ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ.

ಪೊಲೀಸ್ ಇಲಾಖೆಯು ಸಾರ್ವಜನಿಕರ ರಕ್ಷಣೆಯ ಸಲುವಾಗಿ ಸ್ಥಾಪನೆಯಾಗಿದೆ.
ಆದರೆ ಕೆಲ ಸಂದರ್ಭಗಳಲ್ಲಿ ಕೆಲ ಪೊಲೀಸ್ ಸಿಬ್ಬಂದಿಗಳ ವರ್ತನೆಯು ಜನರಲ್ಲಿ ಭಯ ಹುಟ್ಟಿಸುವಂತಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ಪೊಲೀಸ್ ಇಲಾಖೆಯ ಮೇಲಿನ ಜನರ ವಿಶ್ವಾಸ ಕುಸಿಯುತ್ತಿದೆ.
ಈ ಹಿನ್ನೆಲೆಯಲ್ಲಿ ಸಲೀಂ ಅವರು ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು ಜನರೊಂದಿಗೆ ಸೌಜನ್ಯ, ತಾಳ್ಮೆ ಮತ್ತು ಗೌರವದಿಂದ ವರ್ತಿಸಬೇಕು ಎಂದು ಹೇಳಿದ್ದಾರೆ. (new guidelines for state police)
ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು
- ಪಾರದರ್ಶಕ ಕಾರ್ಯವೈಖರಿ
- ಯಾವುದೇ ಕಾರ್ಯಾಚರಣೆ ಅಥವಾ ತನಿಖೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು.
- ಠಾಣೆಗೆ ಬರುವ ಯಾರನ್ನೂ ಅವರ ಹಿನ್ನೆಲೆಯ ಆಧಾರದ ಮೇಲೆ ಬೇರ್ಪಡಿಸಬಾರದು. ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು.
- ದೂರು ಬಂದ ತಕ್ಷಣ ಕಾನೂನಿನ ಪ್ರಕಾರ ಕಾಲಹರಣವಿಲ್ಲದೆ ಪ್ರಕರಣ ದಾಖಲಿಸಬೇಕು.
- ಸಾರ್ವಜನಿಕರೊಂದಿಗೆ ಮಾತನಾಡುವಾಗ ಯಾವಾಗಲೂ ಸೌಜನ್ಯಪೂರ್ಣ ಭಾಷೆಯನ್ನು ಬಳಸಿ.
- ಒರಟು ಮಾತು, ದರ್ಪದ ನಡವಳಿಕೆ ಪೊಲೀಸ್ ಇಲಾಖೆಗೆ ಕಳಂಕ ತಂದೀತು.
- ದೂರುದಾರರ ಅಸಮಾಧಾನವನ್ನು ತಾಳ್ಮೆಯಿಂದ ಕೇಳಿ, ಸೂಕ್ತ ಕ್ರಮ ಕೈಗೊಳ್ಳಬೇಕು.
- ಕರ್ತವ್ಯದಲ್ಲಿರಲಿ ಅಥವಾ ಕರ್ತವ್ಯ ಮುಗಿದ ಬಳಿಕವಾಗಲಿ, ಪೊಲೀಸರ ನಡವಳಿಕೆ ನೈತಿಕವಾಗಿ ಇತರರಿಗೆ ಮಾದರಿಯಾಗಿರಬೇಕು.
- ಯಾವುದೇ ಅಕ್ರಮ ಲಾಭ, ಉಡುಗೊರೆ ಅಥವಾ ಸಹಾಯ ಸ್ವೀಕರಿಸುವುದರಿಂದ ದೂರವಿರಬೇಕು.
- ಠಾಣಾ ದಾಖಲೆಗಳು, ಕೇಸ್ ಫೈಲ್‌ಗಳು ಮತ್ತು ತನಿಖಾ ದಾಖಲೆಗಳಲ್ಲಿ ನಿಖರತೆ ಮತ್ತು ಶಿಸ್ತಿನ ನಿರ್ವಹಣೆ ಇರಬೇಕು.
- ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರೊಂದಿಗೆ ಸಂವೇದನಾಶೀಲವಾಗಿ ವರ್ತಿಸಬೇಕು.
- ಮಹಿಳಾ ಆರೋಪಿಗಳು ಅಥವಾ ಸಂತ್ರಸ್ಥರನ್ನು ಸಂಜೆ 6 ಗಂಟೆಯ ನಂತರ ಠಾಣೆಗೆ ಕರೆತರಬಾರದು.
- ವಿಚಾರಣೆ ಅಗತ್ಯವಿದ್ದರೆ ಮಹಿಳಾ ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲೇ, ಅವರ ಮನೆ ಅಥವಾ ಸುರಕ್ಷಿತ ಸ್ಥಳದಲ್ಲಿ ವಿಚಾರಣೆ ನಡೆಸಬೇಕು.
- ಮಹಿಳಾ ಆರೋಪಿಗಳನ್ನು ಠಾಣೆಯಲ್ಲಿ ಇರಿಸದೆ ರಾಜ್ಯ ಗೃಹ ಆಶ್ರಯ ಕೇಂದ್ರಗಳಲ್ಲಿ ಇರಿಸಬೇಕು.
- ಸಮವಸ್ತ್ರದ ಮೇಲೆ ಧರಿಸುವ ಬಾಡಿ ಕ್ಯಾಮೆರಾಗಳನ್ನು ಹಾಗೂ ಇತರ ತಂತ್ರಜ್ಞಾನಗಳನ್ನು ಜವಾಬ್ದಾರಿಯಿಂದ ಉಪಯೋಗಿಸಬೇಕು.
- ಶೋಧ, ಬಂಧನ ಅಥವಾ ವಿಚಾರಣೆ ಸಂದರ್ಭದಲ್ಲಿ ವ್ಯಕ್ತಿಯ ಗೌಪ್ಯತೆ ಮತ್ತು ಮಾನವೀಯ ಘನತೆಯನ್ನು ಕಾಪಾಡಬೇಕು.
- ಅಧಿಕಾರದ ದುರುಪಯೋಗ, ದೌರ್ಜನ್ಯ ಅಥವಾ ಭ್ರಷ್ಟಾಚಾರದಿಂದ ಸಂಪೂರ್ಣ ದೂರವಿರಬೇಕು.
- ಕರ್ತವ್ಯ ಸಮಯಕ್ಕೆ ನಿಷ್ಠೆಯಿಂದ ಹಾಜರಾಗಬೇಕು ಮತ್ತು ಕಾರ್ಯಕ್ಷಮತೆಯನ್ನು ತೋರಬೇಕು.
- ನೀಟಾದ ಸಮವಸ್ತ್ರ ಅಥವಾ ಮಫ್ತಿ ಧರಿಸುವುದು ಪೊಲೀಸರ ವ್ಯಕ್ತಿತ್ವದ ಪ್ರತಿಬಿಂಬ. ಶಿಸ್ತು ಮತ್ತು ವೃತ್ತಿಪರತೆ ಜನರಲ್ಲಿ ಗೌರವ ಮೂಡಿಸುತ್ತದೆ.
- ಸಾರ್ವಜನಿಕರೊಂದಿಗೆ ಪ್ರಾಮಾಣಿಕತೆ, ನಿಷ್ಠೆ ಮತ್ತು ಪಾರದರ್ಶಕತೆಯ ನಡವಳಿಕೆಯಿಂದ ಪೊಲೀಸ್ ಇಲಾಖೆಯ ಘನತೆಯನ್ನು ಎತ್ತಿಹಿಡಿಯಬೇಕು.
- ಜನರ ನಡುವೆ ನಂಬಿಕೆಯನ್ನು ಬೆಳೆಸುವ ರೀತಿಯಲ್ಲಿ ಕೆಲಸ ಮಾಡಬೇಕು.
- ಸಮುದಾಯ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕಾನೂನುಬದ್ಧ ಮತ್ತು ಮಾನವೀಯ ಪೊಲೀಸಿಂಗ್ ಅಭ್ಯಾಸಗಳ ಮೂಲಕ ಜನರ ವಿಶ್ವಾಸ ಗಳಿಸಬೇಕು.
- ಬೇರೆ ಠಾಣಾ ವ್ಯಾಪ್ತಿಯ ದೂರು ಬಂದಾಗ ದೂರುದಾರರನ್ನು ಹಿಂದಿರಿಸದೆ, ಶೂನ್ಯ FIR ದಾಖಲಿಸಿ ನಂತರ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು.
- ಯಾವುದೇ ಸಂದರ್ಭದಲ್ಲೂ ಬಲಪ್ರಯೋಗ ಅಥವಾ ದರ್ಪ ತೋರಿಕೆ ಮಾಡುವಂತಿಲ್ಲ. ಇದು ಇಲಾಖೆಯ ಘನತೆಗೆ ಧಕ್ಕೆ ತರುತ್ತದೆ.
- ಎಲ್ಲ ನಾಗರಿಕರ ಹಕ್ಕುಗಳಿಗೆ ಗೌರವ ನೀಡಬೇಕು ಮತ್ತು ಸಂಯಮದಿಂದ ವರ್ತಿಸಬೇಕು.
- ನ್ಯಾಯಾಂಗ ಮತ್ತು ಆಡಳಿತಾತ್ಮಕ ಅಧಿಕಾರಿಗಳೊಂದಿಗೆ ಪೂರ್ಣ ಸಹಕಾರ ನೀಡಬೇಕು.