- ಹಳೆಯ ಇಂದಿರಾ ಕ್ಯಾಂಟೀನ್ ನಿರ್ವಹಣೆ ಇಲ್ಲ, ಹೊಸದನ್ನು ಮಾಡಲು ಬಿಬಿಎಂಪಿ ಪ್ಲಾನ್
- ಬರೋಬ್ಬರಿ ₹20 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲು ಬಿಬಿಎಂಪಿ ತೀರ್ಮಾನ
- ಮೊದಲು ಸರ್ಕಾರಿ ಶಾಲೆಗಳಿಗೆ ಉತ್ತಮ ಸೌಲಭ್ಯ ನೀಡಲು ಜನಸಾಮಾನ್ಯರ ಬೇಡಿಕೆ
Bengaluru: ಬೆಂಗಳೂರು ನಗರದಲ್ಲಿ ಬಡ ಜನತೆಗೆ ನಿತ್ಯ ಆಹಾರ ಸಿಗಲಿ ಎಂಬ ಉತ್ತಮ ಉದ್ದೇಶದಿಂದ ಆರಂಭವಾಗಿದ್ದು, ಇಂದಿರಾ ಕ್ಯಾಂಟೀನ್ ಯೋಜನೆ ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಅಷ್ಟಕ್ಕೂ ಅದಕ್ಕೆ ಕಾರಣವೇನೆಂದರೆ ಈಗಾಗಲೇ ಸರಿಯಾಗಿ ನಿರ್ವಹಣೆ ಆಗದ ಹಳೆಯ ಕ್ಯಾಂಟೀನ್‌ಗಳನ್ನು ಬಿಟ್ಟು ಬಿಬಿಎಂಪಿ (BBMP) ಹೊಸದಾಗಿ ₹20 ಕೋಟಿ ರೂಪಾಯಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಲು ಮುಂದಾಗಿದೆ!
ಹೌದು, 2017ರಲ್ಲಿ ಪ್ರತಿ ವಾರ್ಡ್‌ಗೆ ಒಂದರಂತೆ 198 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸುವ ಗುರಿ ಇಟ್ಟುಕೊಂಡರೂ, ಜಾಗದ ಕೊರತೆಯಿಂದಾಗಿ 174 ಶಾಶ್ವತ ಹಾಗೂ 24 ಮೊಬೈಲ್ ಕ್ಯಾಂಟೀನ್‌ಗಳಷ್ಟೇ ಕಾರ್ಯರೂಪಕ್ಕೆ ಬಂದಿದ್ದವು.

ಈ ಪೈಕಿ ಸದ್ಯಕ್ಕೆ 160 ಕ್ಯಾಂಟೀನ್‌ಗಳು ಮಾತ್ರ ಸಕ್ರಿಯವಾಗಿವೆ. ಉಳಿದ ಕ್ಯಾಂಟೀನ್‌ಗಳು ಬಾಕಿಯಾದ ಬಿಲ್‌ಗಳು, ನಿರ್ವಹಣಾ ಕೊರತೆ ಮತ್ತು ಉದ್ಯೋಗಿಗಳ ಬಾಕಿ ವೇತನದ ಕಾರಣದಿಂದ ಈಗಾಗಲೇ ಮುಚ್ಚಲ್ಪಟ್ಟಿವೆ.
ಇಂತಹ ಗಂಭೀರ ಸಮಸ್ಯೆಗಳ ನಡುವೆಯೇ BBMP ಹೊಸ 52 ಕ್ಯಾಂಟೀನ್‌ಗಳನ್ನು ಆರಂಭಿಸಲು ಪ್ಲಾನ್ ಮಾಡಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದಲ್ಲಿ ಈಗಾಗಲೇ ಹಲವೆಡೆ ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ ಹಾಕಲಾಗಿದೆ, ಅಲ್ಲಿ ಆಹಾರದ ಗುಣಮಟ್ಟದ ಕುರಿತು ಕೂಡ ಹಲವಾರು ದೂರುಗಳು ಬಂದಿವೆ.
ಮೆನು ಬದಲಾವಣೆ ಕೂಡ ವಿಳಂಬವಾಗಿದೆ. ಇವೆಲ್ಲಾ ಎಡವಟ್ಟನ್ನು ಸರಿಪಡಿಸದೇ, ಹೊಸ ಯೋಜನೆಗೆ ಅಡ್ಡಬಿದ್ದಿರುವ ಜನರು, ಈ ನಿರ್ಧಾರವನ್ನು ಅಗತ್ಯವಿಲ್ಲದ ತುರ್ತು ವೆಚ್ಚ ಎಂದು ಜನಸಾಮಾನ್ಯರು ಕಿಡಿ ಕಾರಿದ್ದಾರೆ.
ಹೆಚ್ಚಿದ ವಾರ್ಡ್‌ಗಳ ಸಂಖ್ಯೆಗೆ ತಕ್ಕಂತೆ ಹೊಸ ಕ್ಯಾಂಟೀನ್‌ಗಳನ್ನು ಒದಗಿಸುವ ಬಗ್ಗೆ ಸರ್ಕಾರದಿಂದ ಆದೇಶ ಬಂದ ಕಾರಣ BBMP ಈ ಯೋಜನೆಯನ್ನು ಮುಂದಿಟ್ಟಿದೆ.
ಈಗಾಗಲೇ ಸ್ಥಳ ಗುರುತಿಸುವ ಕಾರ್ಯ ಬಹುತೇಕ ಮುಗಿದಿದ್ದು, ಗುತ್ತಿಗೆದಾರರ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಮುಂದಿನ ವಾರಗಳಲ್ಲಿ ಕಾಮಗಾರಿಗೆ ಚಾಲನೆ ಸಿಗಲಿದೆ ಎನ್ನಲಾಗಿದೆ.ಆದರೆ ಸಾರ್ವಜನಿಕರು ಈ ನಿರ್ಧಾರವನ್ನು ಸುಲಭವಾಗಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ.
“ಹಳೆಯದು ಸರಿಯಾಗಿ ನಡೀತಿಲ್ಲ, ಹೊಸದೇಕೆ?” ಎಂಬ ಪ್ರಶ್ನೆ ಎತ್ತುತ್ತಿದ್ದಾರೆ. ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ.
ಶಾಲೆಗಳಿಗೆ ಸರಿಯಾದ ಶೌಚಾಲಯ, ಕುಡಿಯುವ ನೀರು, ಬಾಗಿಲು, ಛಾವಣಿ,ಕಿಟಕಿ ಇಲ್ಲದ ಸ್ಥಿತಿಯಲ್ಲಿರುವುದು ಗಮನಾರ್ಹ.
ಇಂಥ ಸಂದರ್ಭದಲ್ಲೂ ಶಾಲೆಗಳ ಬದಲು ಕ್ಯಾಂಟೀನ್‌ಗಳಿಗೆ ಮಿಲಿಯನ್ ಕೋಟಿ ವೆಚ್ಚ ಮಾಡುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ.
ಇದನ್ನು ಓದಿ : ಓಲಾ, ಊಬರ್ ಮಾದರಿಯಲ್ಲೇ ಆ್ಯಂಬುಲೆನ್ಸ್ ಬುಕಿಂಗ್ ಜಾರಿ, ರಾಜ್ಯ ಸರ್ಕಾರ ಮಹತ್ವದ ನಿರ್ಧಾರ
ಇತ್ತ BBMP ವಿರುದ್ಧ ಭದ್ರ ನಿರ್ವಹಣೆಯ ಕೊರತೆಯ ಆರೋಪ, ಅತ್ತ ಸರ್ಕಾರದ ಸಾರ್ವಜನಿಕ ಹಣದ ದುರುಪಯೋಗದ ಬಗ್ಗೆ ಚರ್ಚೆ – ಈ ಎರಡರ ನಡುವೆ ಈಗಾಗಲೇ ಇರುವ ಇಂದಿರಾ ಕ್ಯಾಂಟೀನ್ ಮರುಜೀವನ ಪಡೆಯುತ್ತದೆಯೋ, ಅಥವಾ ಹೊಸದು ಆರಂಭವಾಗುತ್ತದೆಯೋ ಕಾದು ನೋಡಬೇಕಿದೆ. (New Indira Canteen)