- ದೇಶಾದ್ಯಂತ ಹೊಸ ಬಾಡಿಗೆ ನಿಯಮ ಜಾರಿ : ಮನೆ ಮಾಲೀಕರು (new rent act in india) ಮತ್ತು ಬಾಡಿಗೆದಾರರಿಗೆ ಪ್ರಮುಖ ಮಾರ್ಗಸೂಚಿ
- ಸೆಕ್ಯೂರಿಟಿ ಡಿಪಾಸಿಟ್ ಮಿತಿ, ಲಿಖಿತ ಒಪ್ಪಂದ ಕಡ್ಡಾಯ: ಬಾಡಿಗೆ ಮಾರುಕಟ್ಟೆಗೆ ಹೊಸ ನಿಯಮಗಳು
- ವರ್ಷಕ್ಕೆ ಒಂದೇ ಬಾರಿ ಬಾಡಿಗೆ ಏರಿಕೆ, 24 ಗಂಟೆ ಮೊದಲು ಮಾಹಿತಿ ನೀಡಿದರೆ ಮಾತ್ರ ಮನೆಗೆ ಭೇಟಿ
New delhi: ದೇಶಾದ್ಯಂತ ಬಾಡಿಗೆ ಮಾರುಕಟ್ಟೆಯನ್ನು ಹೆಚ್ಚು ಪಾರದರ್ಶಕ ಮತ್ತು ಸುಗಮಗೊಳಿಸುವ (new rent act in india) ಉದ್ದೇಶದಿಂದ ಕೇಂದ್ರ ಸರ್ಕಾರವು ‘ಮಾದರಿ ಬಾಡಿಗೆ ಕಾಯ್ದೆ’ (Model Tenancy Act) ಅಡಿಯಲ್ಲಿ ಹೊಸ ಬಾಡಿಗೆ ನಿಯಮಗಳನ್ನು ರೂಪಿಸಿದೆ.
ಈ ಕಾಯ್ದೆಯ ಮುಖ್ಯ ಉದ್ದೇಶ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಸಂಬಂಧವನ್ನು ಸಮತೋಲನಗೊಳಿಸುವುದಾಗಿದೆ.
ಹಲವಾರು ವರ್ಷಗಳಿಂದ ಬಾಡಿಗೆ ವ್ಯವಹಾರಗಳಲ್ಲಿ ಕಂಡುಬರುವ ಅಸ್ಪಷ್ಟತೆ, ಅಧಿಕ ಡಿಪಾಸಿಟ್ (Deposit) ಬೇಡಿಕೆ ಹಾಗೂ ವಿವಾದಗಳನ್ನು ಕಡಿಮೆ ಮಾಡಲು ಈ ಹೊಸ ನಿಯಮಗಳು ಸಹಾಯ ಮಾಡಲಿವೆ ಎಂದು ಸರ್ಕಾರ ಹೇಳಿದೆ.

ವಿಶೇಷವಾಗಿ ಬಾಡಿಗೆದಾರರ ಹಿತಾಸಕ್ತಿಯನ್ನು ಕಾಪಾಡುವ ಜೊತೆಗೆ ಮನೆ ಮಾಲೀಕರಿಗೂ ಸ್ಪಷ್ಟ ನಿಯಮಗಳನ್ನು ನೀಡುವ ಪ್ರಯತ್ನ ಇದಾಗಿದೆ.
ಈ ಹೊಸ ನಿಯಮಗಳಲ್ಲಿ ಪ್ರಮುಖವಾಗಿ ಗಮನ ಸೆಳೆಯುವ ಅಂಶವೆಂದರೆ (new rent act in india) ಸೆಕ್ಯೂರಿಟಿ ಡಿಪಾಸಿಟ್‌ಗೆ ಮಿತಿ ವಿಧಿಸಿರುವುದು.
ಇನ್ನು ಮುಂದೆ ಮನೆ ಮಾಲೀಕರು ತಮ್ಮ ಇಚ್ಛೆಯಂತೆ ಭಾರಿ ಮೊತ್ತದ ಅಡ್ವಾನ್ಸ್ (Advance) ಅಥವಾ ಡಿಪಾಸಿಟ್ ಕೇಳಲು ಸಾಧ್ಯವಿಲ್ಲ.
ವಸತಿ ಮನೆಗಳಿಗೆ ಗರಿಷ್ಠವಾಗಿ ಎರಡು ತಿಂಗಳ ಬಾಡಿಗೆಯಷ್ಟೇ ಡಿಪಾಸಿಟ್ ಪಡೆಯಲು ಅವಕಾಶ ನೀಡಲಾಗಿದೆ.
ಅದೇ ರೀತಿ ಕಚೇರಿ ಅಥವಾ ಅಂಗಡಿಗಳಂತಹ ವಾಣಿಜ್ಯ ಸ್ಥಳಗಳಿಗೆ ಗರಿಷ್ಠ ಆರು ತಿಂಗಳ ಬಾಡಿಗೆಯಷ್ಟೇ ಡಿಪಾಸಿಟ್ ನಿಗದಿಪಡಿಸಲಾಗಿದೆ.
ಇದರಿಂದ ಬಾಡಿಗೆ ಮನೆ ಹುಡುಕುತ್ತಿರುವ ಸಾಮಾನ್ಯ ಜನರಿಗೆ ದೊಡ್ಡ ಮಟ್ಟದ ಆರ್ಥಿಕ ಭಾರ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಇನ್ನೊಂದು ಮಹತ್ವದ ನಿಯಮವೆಂದರೆ ಲಿಖಿತ ಬಾಡಿಗೆ ಒಪ್ಪಂದ ಕಡ್ಡಾಯವಾಗಿರುವುದು. ಇನ್ನು ಮುಂದೆ ಬಾಯಿ ಮಾತಿನ ಒಪ್ಪಂದಗಳಿಗೆ ಕಾನೂನು ಮಾನ್ಯತೆ ಇರದು.
ಮನೆ ಮಾಲೀಕರು ಮತ್ತು ಬಾಡಿಗೆದಾರರು ಕಡ್ಡಾಯವಾಗಿ ಲಿಖಿತ ಒಪ್ಪಂದ ಮಾಡಿಕೊಂಡು ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಬಳಿ ನೋಂದಣಿ ಮಾಡಿಸಬೇಕು.
ಒಪ್ಪಂದ ಮಾಡಿಕೊಂಡ ನಂತರ 60 ದಿನಗಳೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದು ಅಗತ್ಯವಾಗಿದೆ. ಇದರಿಂದ ಭವಿಷ್ಯದಲ್ಲಿ ಉಂಟಾಗುವ ಗೊಂದಲಗಳು ಮತ್ತು ಕಾನೂನು ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆ ಇದೆ.
ಬಾಡಿಗೆ ಹೆಚ್ಚಿಸುವ ವಿಚಾರದಲ್ಲಿಯೂ ಈ ಕಾಯ್ದೆಯಲ್ಲಿ ಸ್ಪಷ್ಟ ನಿಯಮಗಳನ್ನು ತರಲಾಗಿದೆ. ಮನೆ ಮಾಲೀಕರು ತಮಗೆ ಇಷ್ಟ ಬಂದಾಗ ಬಾಡಿಗೆ ಹೆಚ್ಚಿಸಲು ಸಾಧ್ಯವಿಲ್ಲ.
ವರ್ಷಕ್ಕೆ ಒಂದು ಬಾರಿ ಮಾತ್ರ ಬಾಡಿಗೆ ಹೆಚ್ಚಿಸಲು ಅವಕಾಶ ನೀಡಲಾಗಿದೆ. ಜೊತೆಗೆ ಬಾಡಿಗೆ ಹೆಚ್ಚಿಸುವ ಮೊದಲು ಕನಿಷ್ಠ 90 ದಿನಗಳ ಮುಂಚಿತವಾಗಿ ಬಾಡಿಗೆದಾರರಿಗೆ ಲಿಖಿತ ನೋಟಿಸ್ ನೀಡಬೇಕು. ಇದರ ಮೂಲಕ ಬಾಡಿಗೆದಾರರಿಗೆ ಪೂರ್ವಸಿದ್ಧತೆ ಮಾಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಸಿಗುತ್ತದೆ.
ಈ ಕಾಯ್ದೆಯಲ್ಲಿ ಬಾಡಿಗೆದಾರರ ಹಕ್ಕು ಮತ್ತು ಗೌಪ್ಯತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸರಿಯಾದ ಕಾರಣವಿಲ್ಲದೆ ಬಾಡಿಗೆದಾರರನ್ನು ಮನೆಯಿಂದ ಹೊರಹಾಕಲು ಸಾಧ್ಯವಿಲ್ಲ.
ಮನೆ ಮಾಲೀಕರು ಮನೆಗೆ ಭೇಟಿ ನೀಡಬೇಕಾದರೆ ಕನಿಷ್ಠ 24 ಗಂಟೆಗಳ ಮುಂಚಿತವಾಗಿ ಮಾಹಿತಿ ನೀಡಬೇಕು. ಜೊತೆಗೆ ಬಾಡಿಗೆ ಸಂಬಂಧಿತ ವಿವಾದಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಲು ಪ್ರತ್ಯೇಕವಾಗಿ ‘ರೆಂಟ್ ಅಥಾರಿಟಿ’ ಹಾಗೂ ‘ಬಾಡಿಗೆ ನ್ಯಾಯಾಲಯ’ಗಳನ್ನು ಸ್ಥಾಪಿಸುವ ಯೋಜನೆಯೂ ಇದೆ.
ಇದರಿಂದ ಸಿವಿಲ್ ನ್ಯಾಯಾಲಯಗಳಲ್ಲಿ ವರ್ಷಗಟ್ಟಲೆ ಕಾಯುವ ಅಗತ್ಯ ಕಡಿಮೆಯಾಗಲಿದೆ.ಗಮನಿಸಬೇಕಾದ ವಿಷಯವೆಂದರೆ ಈ ನಿಯಮಗಳು ಕೇಂದ್ರ ಸರ್ಕಾರದ ಮಾದರಿ ಕಾಯ್ದೆಯನ್ನು ಆಧರಿಸಿವೆ. ರಾಜ್ಯ ಸರ್ಕಾರಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಜಾರಿಗೆ ತರುವ ಅಧಿಕಾರವನ್ನು ಹೊಂದಿವೆ.