- ಇ-ಚಲನ್ ವಂಚನೆ: ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಲೂಟಿ
- ಬೆಳಗಾವಿ, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ನಕಲಿ SMS ಕಳುಹಿಸಿ ಹಣ ದೋಚಿದ ಪ್ರಕರಣಗಳು ಬಹಿರಂಗ.
- ನಕಲಿ ಇ-ಚಲನ್ ಲಿಂಕ್ ಕ್ಲಿಕ್ ಮಾಡಿದರೆ ಖಾತೆಯ ಹಣ ಮಂಗಮಾಯ
Bengaluru: ರಾಜ್ಯದಲ್ಲಿ ಸೈಬರ್ ವಂಚನೆಗಳು(Cyber frauds) ದಿನೇದಿನೇ ಹೆಚ್ಚುತ್ತಿವೆ. ಇತ್ತೀಚೆಗೆ ಬೆಳಗಾವಿ, ಶಿವಮೊಗ್ಗ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ
“ಇ-ಚಲನ್ ವಂಚನೆ”(E-challan fraud) ಎಂಬ ಹೊಸ ಮಾದರಿ ಮೋಸ ತಲೆದೋರಿದೆ. ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ನಕಲಿ SMS ಕಳುಹಿಸಿ ಜನರಿಂದ ಹಣ ದೋಚುವ ಹೊಸ ತಂತ್ರವನ್ನು
ಸೈಬರ್ ದುಷ್ಕರ್ಮಿಗಳು ಬಳಸುತ್ತಿದ್ದಾರೆ. ಬೆಳಗಾವಿಯೊಂದರಲ್ಲಿ ನಡೆದ ಘಟನೆಯು ಈಗ ಎಲ್ಲೆಡೆ ಎಚ್ಚರದ ಗಂಟೆ ಮೊಳಗಿಸಿದೆ. ಸ್ಥಳೀಯ ವಾಹನ ಚಾಲಕರೊಬ್ಬರಿಗೆ ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ
“ನಿಮ್ಮ ವಾಹನದ ಮೇಲೆ ಬಾಕಿ ದಂಡವಿದೆ, ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂಬ ಸಂದೇಶ ಬಂದಿತ್ತು. ಅದರಲ್ಲಿ APK ಫೈಲ್ ರೂಪದ ಆ್ಯಪ್ ಲಿಂಕ್ ಒಂದಿತ್ತು.
ಅವರು ಅದನ್ನು ಡೌನ್‌ಲೋಡ್ ಮಾಡಿದ ತಕ್ಷಣ, ಅವರ ಫೋನ್‌ನ ಸಂಪೂರ್ಣ ಡೇಟಾ ಹ್ಯಾಕ್ ಆಗಿ, ಬ್ಯಾಂಕ್ ಖಾತೆಯಿಂದ ರೂ. 40,000 ನಷ್ಟವಾಗಿದೆ.
ಇದೇ ರೀತಿಯಲ್ಲಿ ಶಿವಮೊಗ್ಗದಲ್ಲಿಯೂ ಇತ್ತೀಚೆಗೆ ಒಬ್ಬ ನಿವಾಸಿ ಇದೇ ರೀತಿಯ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿದ ಪರಿಣಾಮ, ಅವರ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು ರೂ. 1.5 ಲಕ್ಷ ಕಳೆದುಕೊಂಡಿದ್ದಾರೆ.
ಅಷ್ಟಕ್ಕೂ ಸೈಬರ್ ಅಪರಾಧಿಗಳು ಟ್ರಾಫಿಕ್ ಇಲಾಖೆಯ ಅಧಿಕೃತ ಅಧಿಕಾರಿಗಳಂತೆ ವರ್ತಿಸುತ್ತಾರೆ. ಮೊದಲು ಅವರು ಬಲಿಯಾಗುವವರ ಮೊಬೈಲ್ ಸಂಖ್ಯೆಗೆ ನಕಲಿ ಇ-ಚಲನ್ SMS ಕಳುಹಿಸುತ್ತಾರೆ.
ಈ ಸಂದೇಶಗಳು ತುಂಬಾ ನಿಜವಾದಂತೆ ಕಾಣುತ್ತವೆ — ಅದರಲ್ಲಿ ನಿಮ್ಮ ವಾಹನ ಸಂಖ್ಯೆ ಅಥವಾ ಟ್ರಾಫಿಕ್ ದಂಡ ಪಾವತಿ ಕುರಿತು ಮಾಹಿತಿಯಿರುತ್ತದೆ. ನಂತರ, “ಪಾವತಿಸಲು ಇಲ್ಲಿ ಕ್ಲಿಕ್ ಮಾಡಿ”
ಎಂಬ ಲಿಂಕ್ ಅಥವಾ APK ಫೈಲ್ ಅಟ್ಯಾಚ್ ಮಾಡಿರುತ್ತಾರೆ. ಬಲಿಯಾಗುವವರು ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅಥವಾ ಆ್ಯಪ್ ಇನ್ಸ್ಟಾಲ್ ಮಾಡಿದರೆ, ಅವರ ಫೋನ್‌ನ ಸಂಪೂರ್ಣ ಮಾಹಿತಿಯು
(ಫೋಟೋಗಳು, ಕಾನ್ಟ್ಯಾಕ್ಟ್‌ಗಳು, OTPಗಳು, ಬ್ಯಾಂಕ್ ವಿವರಗಳು) ಹ್ಯಾಕರ್‌ಗಳ ಕೈಗೆ ಸೇರುತ್ತದೆ. ಈ ಮಾಹಿತಿಯ ಮೂಲಕ ದುಷ್ಕರ್ಮಿಗಳು ಆನ್‌ಲೈನ್ ಬ್ಯಾಂಕಿಂಗ್ ಅಥವಾ UPI ಮೂಲಕ ಹಣ ವರ್ಗಾವಣೆ ಮಾಡಿ ಖಾಲಿ ಮಾಡುತ್ತಾರೆ.

ಎಚ್ಚರಿಕೆ! ನೀವು ಕೂಡ ವಂಚನೆಗೆ ಒಳಗಾಗದೆ ಇರಲು ಗಮನಿಸಬೇಕಾದ ಪ್ರಮುಖ ಅಂಶಗಳು
- ಅಧಿಕೃತ ಸಂದೇಶಗಳನ್ನು ಗುರುತಿಸಿ
ನಿಜವಾದ ಇ-ಚಲನ್ SMSಗಳು ಎಂದಿಗೂ ವೈಯಕ್ತಿಕ ಸಂಖ್ಯೆಯಿಂದ ಬರುವುದಿಲ್ಲ. ಅವು “VK-VAAHAN” ಅಥವಾ “BZ-TRAFCM” ಮುಂತಾದ ಸರ್ಕಾರದ ಅಧಿಕೃತ ಕಳುಹಿಸುವವರ ಐಡಿಗಳಿಂದ ಮಾತ್ರ ಬರುತ್ತವೆ.
- ಲಿಂಕ್ ಪರಿಶೀಲಿಸಿ
ಅಧಿಕೃತ ಲಿಂಕ್‌ಗಳು ಯಾವಾಗಲೂ .gov.in ಅಡ್ಡನೆಮ್‌ನೊಂದಿಗೆ ಕೊನೆಗೊಳ್ಳುತ್ತವೆ — ಉದಾಹರಣೆಗೆ, echallan.parivahan.gov.in. ವಂಚಕರು .in ಅಥವಾ .org ಮುಂತಾದ ಹೋಲುವ ಡೊಮೇನ್‌ಗಳನ್ನು ಬಳಸುತ್ತಾರೆ, ಇದು ನಕಲಿ ಸೈಟ್‌ಗಳ ಗುರುತು.
- ಭಯ ಹುಟ್ಟಿಸುವ ಸಂದೇಶಗಳ ಬಗ್ಗೆ ಎಚ್ಚರದಿಂದಿರಿ
“ತಕ್ಷಣ ದಂಡ ಪಾವತಿಸದಿದ್ದರೆ ಬಂಧನ” ಅಥವಾ “ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂಬ ರೀತಿಯ ಬೆದರಿಕೆಗಳೊಂದಿಗೆ SMS ಬಂದರೆ ಅದು ನಕಲಿ ಎಂಬುದು ಖಚಿತ. ನಿಜವಾದ ಟ್ರಾಫಿಕ್ ಚಲನ್‌ಗಳಿಗೆ ಪಾವತಿ ಗಡುವು (due date) ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ, ತುರ್ತು ಅಥವಾ ಬೆದರಿಕೆ ಧೋರಣೆಯಿಲ್ಲ.
- ನಿಮ್ಮ ವಾಹನದ ವಿವರಗಳ ಪರಿಶೀಲನೆ
ನಕಲಿ SMSಗಳಲ್ಲಿ ಸಾಮಾನ್ಯವಾಗಿ ನಿಮ್ಮ ವಾಹನದ ಸಂಖ್ಯೆ, ದಂಡದ ದಿನಾಂಕ, ಸ್ಥಳ ಇತ್ಯಾದಿ ನಿಖರ ಮಾಹಿತಿಯಿರದು. ಅಧಿಕೃತ ನೋಟಿಸ್‌ಗಳಲ್ಲಿ ಸಂಪೂರ್ಣ ವಿವರಗಳು ಇರುತ್ತವೆ.
- ಪಾವತಿ ವಿಧಾನಗಳ ಬಗ್ಗೆ ಎಚ್ಚರಿಕೆ
ಅಧಿಕೃತ ಚಲನ್ ಪಾವತಿ ಸದಾ ಸರ್ಕಾರದ ಸುರಕ್ಷಿತ ಪೋರ್ಟಲ್‌ಗಳ ಮೂಲಕ ಮಾತ್ರ ಮಾಡಬೇಕು. ವಂಚಕರು ಖಾಸಗಿ ಖಾತೆಗಳಿಗೆ ಹಣ ವರ್ಗಾವಣೆ, QR ಕೋಡ್ ಸ್ಕ್ಯಾನ್ ಅಥವಾ UPI ಮೂಲಕ ಪಾವತಿಗೆ ಒತ್ತಾಯಿಸುತ್ತಾರೆ — ಇವು ಎಲ್ಲಾ ನಕಲಿ ವಿಧಾನಗಳು.
- ಅನಧಿಕೃತ ಆ್ಯಪ್‌ಗಳನ್ನು ಇನ್ಸ್ಟಾಲ್ ಮಾಡಬೇಡಿ
SMS ಅಥವಾ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮೂಲಕ ಬಂದ ಯಾವುದೇ ಆ್ಯಪ್ ಅಥವಾ APK ಫೈಲ್‌ನ್ನು ಎಂದಿಗೂ ಇನ್ಸ್ಟಾಲ್ ಮಾಡಬೇಡಿ. ಇಂತಹ ಆ್ಯಪ್‌ಗಳು ಸ್ಪೈವೇರ್ ಅಥವಾ ಟ್ರೋಜನ್ ಆಗಿರಬಹುದು.
ಸುರಕ್ಷಿತವಾಗಿ ಇ-ಚಲನ್ ಪರಿಶೀಲಿಸುವ ಅಧಿಕೃತ ವಿಧಾನ
ನಿಮ್ಮ ವಾಹನದ ಮೇಲೆ ಯಾವುದೇ ಟ್ರಾಫಿಕ್ ದಂಡವಿದೆಯೇ ಎಂದು ತಿಳಿಯಲು, https://echallan.parivahan.gov.in/ ಅಥವಾ https://transport.karnataka.gov.in/ ಗೆ ಭೇಟಿ ನೀಡಿ.
ಇದನ್ನು ಓದಿ : ಸಾರಿಗೆ ನೌಕರರ ಬೇಡಿಕೆಗಳಿಗೆ ಕಿವಿಗೊಡದ ಸರ್ಕಾರ: ಮತ್ತೆ ಮುಷ್ಕರಕ್ಕೆ ಸಿದ್ಧತೆ
ಇಲ್ಲಿ ನಿಮ್ಮ ವಾಹನ ನೋಂದಣಿ ಸಂಖ್ಯೆಯನ್ನು ನಮೂದಿಸಿ ಅಧಿಕೃತ ವಿವರ ಪಡೆಯಬಹುದು.