ನ್ಯೂಜಿಲೆಂಡ್, ಏ. 08: ವರ್ಷದ ಹಿಂದೆ ಕೊರೊನಾ ಮೊದಲ ಬಾರಿಗೆ ಕಾಣಿಸಿಕೊಂಡಾಗ ಅದನ್ನು ಕಟ್ಟಿಹಾಕುವಲ್ಲಿ ಯಶಸ್ಸು ಕಂಡಿದ್ದ ಪುಟ್ಟ ದ್ವೀಪ ರಾಷ್ಟ್ರ ನ್ಯೂಜಿಲೆಂಡ್ ಈ ಬಾರಿ ಕೊರೊನಾ ಎರಡನೆಯ ಅಲೆಗೆ ತತ್ತರಿಸಿದೆ. ಈ ಮಧ್ಯೆ, ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ತಾರಕಕ್ಕೇರುವ ಕುರಿತು ಆತಂಕ ಶುರುವಾಗಿದ್ದು, ಅನೇಕ ರಾಜ್ಯಗಳು ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಜಾರಿಗೊಳಿಸಿವೆ. ಇದರ ಮಧ್ಯೆ, ಭಾರತದಲ್ಲಿ ಸೋಂಕು ಹೆಚ್ಚಿರುವ ಕಾರಣ ಭಾರತೀಯ ಪ್ರಯಾಣಿಕರ ಆಗಮನಕ್ಕೆ ನ್ಯೂಜಿಲೆಂಡ್ ನಿರ್ಬಂಧ ಹೇರಿದೆ. ಈ ಬಗ್ಗೆ ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಸಿಂದಾ ಅರ್ಡೆರ್ನ್ ಆದೇಶ ಹೊರಡಿಸಿದ್ದು, ಭಾರತದಿಂದ ಆಗಮಿಸುವ ಯಾವುದೇ ಪ್ರಯಾಣಿಕರಿಗೂ ನ್ಯೂಜಿಲೆಂಡ್ ಪ್ರವೇಶಿಸಲು ಅನುಮತಿ ಇಲ್ಲ ಎಂದಿದ್ದಾರೆ.
ಏಪ್ರಿಲ್ 11ರಿಂದ ಏಪ್ರಿಲ್ 28ರವರೆಗೆ ಭಾರತದಿಂದ ಬರುವವರಿಗೆ ನಿರ್ಬಂಧ ಹೇರಲಾಗಿದ್ದು, ಭಾರತದಲ್ಲಿರುವ ನ್ಯೂಜಿಲೆಂಡ್ ನಾಗರಿಕರಿಗೂ ಪ್ರವೇಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ದಕ್ಷಿಣ ಏಷ್ಯಾ ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದ್ದು, ನ್ಯೂಜಿಲ್ಯಾಂಡ್ನಲ್ಲಿ ಪತ್ತೆಯಾಗಿರುವ 23 ಹೊಸ ಕೊರೊನಾ ಪ್ರಕರಣಗಳ ಪೈಕಿ 17 ಸೋಂಕಿತರು ಭಾರತದಿಂದ ಆಗಮಿಸಿದ್ದರು ಎಂಬುದು ಬಹಿರಂಗವಾದ ಬೆನ್ನಲ್ಲೇ ನ್ಯೂಜಿಲ್ಯಾಂಡ್ ಈ ನಿರ್ಧಾರಕ್ಕೆ ಮುಂದಾಗಿದೆ.