New Delhi : ಮಹತ್ವದ ಬೆಳವಣಿಗೆಯಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ, ಚಂಡೀಗಢ ಮತ್ತು ದೆಹಲಿಯ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿ,
ಪಾಕಿಸ್ತಾನದೊಂದಿಗೆ (Pakistan) ನಂಟು ಹೊಂದಿದ್ದ ದರೋಡೆಕೋರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆದುಕೊಂಡಿದೆ.
ಇನ್ನು ರಾಷ್ಟ್ರೀಯ ತನಿಖಾ ದಳ ಸೇರಿದಂತೆ ಅನೇಕ ಏಜೆನ್ಸಿಗಳು ಕಳೆದ ಎಂಟು ತಿಂಗಳಿಂದ ದರೋಡೆಕೋರರ ಮತ್ತು ಭಯೋತ್ಪಾದಕರ (Terrorists) ನಡುವಿನ ಸಂಬಂಧವನ್ನು ಬೇಧಿಸುವ ನಿಟ್ಟಿನಲ್ಲಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿವೆ.
ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದೊಂದು ಮಹತ್ವದ ಕಾರ್ಯಾಚರಣೆಯಾಗಿದೆ.

ಇನ್ನು ಸ್ಥಳೀಯ ಪೊಲೀಸರೊಂದಿಗೆ ಎನ್ಐಎ(NIA) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಗ್ಯಾಂಗ್ಸ್ಟರ್ ವೀರೇಂದ್ರ ಪ್ರತಾಪ್ ಸಿಂಗ್ ಅಲಿಯಾಸ್ ಕಲಾ ರಾಣಾನ ಯಮುನಾನಗರ ನಿವಾಸದಿಂದ ಆರು ಅಕ್ರಮ ಶಸ್ತ್ರಾಸ್ತ್ರಗಳು, 90 ಲೈವ್ ಕಾರ್ಟ್ರಿಡ್ಜ್ಗಳು ಮತ್ತು 10 ಮೊಬೈಲ್ ಫೋನ್ ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಂಜಾಬ್‌ನ (Punjab) ಪ್ರಸಿದ್ದ ಗಾಯಕ ಸಿದ್ದು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಗೋಲ್ಡಿ ಬ್ರಾರ್ನ `ಮುಕ್ತಸರʼ ನಿವಾಸದಲ್ಲೂ ಸುಮಾರು ಮೂರು ಗಂಟೆಗಳ ಕಾಲ ಶೋಧ ನಡೆಸಲಾಗಿದೆ.
ಅದೇ ರೀತಿ ದರೋಡೆಕೋರ ಗೌರವ್ ಪಾಟಿಯಲ್ ಅಲಿಯಾಸ್ ಲಕ್ಕಿ ನಿವಾಸದಿಂದ ಎನ್ಐಎ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಇದನ್ನೂ ಓದಿ : https://vijayatimes.com/queen-elizabeth-used-tea-bag-is-for-sale/
ಇನ್ನು ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಜಗ್ಗು ಭಗವಾನ್ಪುರಿಯ ಬಟಾಲಾನ ಗುರುದಾಸ್ಪುರ ನಿವಾಸದಿಂದ ಎರಡು ಮೊಬೈಲ್ ಫೋನ್ ಸೆಟ್ಗಳು ಮತ್ತು ಕೆಲವು ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಜೈಲಿನಲ್ಲಿರುವ ಇನ್ನೋರ್ವ ದರೋಡೆಕೋರ ಲಾರೆನ್ಸ್ ಬಿಷ್ಣೋಯನ ದುತರನ್ವಾಲಿ ಮತ್ತು ಅಬೋಹರ್ ನಿವಾಸದಲ್ಲಿ 3 ಗಂಟೆಗಳ ಕಾಲ ಶೋಧ ನಡೆಸಲಾಗಿದ್ದು, ಒಂದು ಮೊಬೈಲ್ ಸೆಟ್ ಮತ್ತು ಎರಡು ಮೊಬೈಲ್ ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಂಜಾಬ್ನಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಪಾಕಿಸ್ತಾನದ ಐಎಸ್ಐ ಸಂಚು ನಡೆಸುತ್ತಿದೆ. ಅದಕ್ಕಾಗಿ ಸ್ಥಳೀಯ ದರೋಡೆಕೋರರನ್ನು ಬಳಸಿಕೊಳ್ಳುತ್ತಿದೆ ಎಂದು ಪಂಜಾಬ್ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪಾಕಿಸ್ತಾನ ಮೂಲದ ಖಲಿಸ್ತಾನಿ ಭಯೋತ್ಪಾದಕರು ನಿರುದ್ಯೋಗಿ ಯುವಕರಿಗೆ ಸಣ್ಣ ಮೊತ್ತದ ಹಣವನ್ನು ನೀಡುವ ಮೂಲಕ ಆಮಿಷವೊಡ್ಡುತ್ತಿದ್ದಾರೆ.

ಪಾಕಿಸ್ತಾನದಲ್ಲಿ ನೆಲೆಸಿರುವ ದರೋಡೆಕೋರ ಹರ್ವಿಂದರ್ ಸಿಂಗ್ ರಿಂಡಾ, ಭಾರತದಲ್ಲಿರುವ ಸಾವಿರಕ್ಕೂ ಹೆಚ್ಚು ಕ್ರಿಮಿನಲ್ಗಳೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.
ಇನ್ನೊಂದೆಡೆ ಭಾರತೀಯ ಸೇನೆಯ ಗುಪ್ತಚರ ವಿಭಾಗವು ಕೂಡಾ ದರೋಡೆಕೋರರ ಮತ್ತು ಭಯೋತ್ಪಾದಕರ ಸಂಪರ್ಕಗಳ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.
- ಮಹೇಶ್ ಪಿ.ಎಚ್