ಬೆಲೆ ಏರಿಕೆ ನಿಯಂತ್ರಣ ಸರ್ಕಾರದಿಂದ ಸಾಧ್ಯವಿಲ್ಲ
ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.ಇದೊಂದು ಗಂಭೀರವಾದ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಬೆಲೆ ಇಳಿಕೆ ಆಗುವರೆಗೂ ಏರಿಕೆ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಇಂಧನವನ್ನ ಕಡಿಮೆ ಬೆಲೆಗೆ ಗ್ರಾಹಕರಿಗೆ ತಲುಪಿಸುವ ಕುರಿತು ಚರ್ಚೆ ನಡೆಸಬೇಕಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನ ಕಡಿಮೆ ಅಥವಾ ನಿಲ್ಲಿಸುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ತೈಲ ಬೆಲೆಯನ್ನ ನಿಯಂತ್ರಿಸಲು ಸರ್ಕಾರದಿಂದ ಸಾಧ್ಯವಿಲ್ಲ. ಈಗಾಗಲೇ ತೈಲ ಮಾರುಕಟ್ಟೆಯನ್ನ ಮುಕ್ತವಾಗಿದ್ದು, ಕಂಪನಿಗಳು ಆಮದು ಮಾಡಿಕೊಂಡು ಮಾರಾಟ ಮಾಡುತ್ತವೆ ಎಂದು ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರು.ಈಗಾಗಲೇ ಕೆಲ ರಾಜ್ಯಗಳಲ್ಲಿ ತೈಲ ಬೆಲೆ ಶತಕ ಬಾರಿಸಿದೆ. ಶನಿವಾರ ಮುಂಬೈನಲ್ಲಿ ಪೆಟ್ರೋಲ್ 97 ರೂಪಾಯಿ ಮತ್ತು ಡೀಸೆಲ್ 88 ರೂಪಾಯಿ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 93.21 ರೂ ಮತ್ತು ಡೀಸೆಲ್ 85.44 ರೂ.ಗೆ ಮಾರಾಟವಾಗಿದೆ.
ಪ್ರಧಾನಿ ಮೋದಿ ಹೇಳಿದ್ದೇನು?: ಒಂದು ವೇಳೆ ಹಿಂದಿನ ಸರ್ಕಾರಗಳು ತೈಲ ಆಮದು ಅವಲಂಬನೆಗೆ ಕಡಿವಾಣ ಹಾಕಿದ್ದರೆ ಇಂದು ಮಧ್ಯಮ ವರ್ಗಕ್ಕೆ ಸಮಸ್ಯೆ ಆಗುತ್ತಿರಲಿಲ್ಲ.
ನಮ್ಮ ಸರ್ಕಾರ ತೈಲ ಆಮದು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈಗಿನ ತೈಲ ದರ ಏರಿಕೆಗೆ ಹಿಂದಿನ ಸರ್ಕಾರದ ನೀತಿಯೇ ಕಾರಣ ಎಂದು ಮೋದಿ ಅವರು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು.2019-20ನೇ ಆರ್ಥಿಕ ವರ್ಷದಲ್ಲಿ ಶೇ. 85ರಷ್ಟು ಇಂಧನವನ್ನು ವಿದೇಶಗಳಿಂದಲೇ ಆಮದು ಮಾಡಲಾಗಿದೆ. ಶೇ.53ರಷ್ಟು ಎಲ್ಪಿಜಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಅಗತ್ಯ ಇಂಧನಗಳ ಬೆಲೆ ಹೆಚ್ಚಳ ನಿಜಕ್ಕೂ ತೀವ್ರ ಕಳವಳಕಾರಿಯಾಗಿದೆ. ಒಂದು ವೇಳೆ ಹಿಂದಿನ ಸರ್ಕಾರಗಳು ಈ ವಿಚಾರದ ಬಗ್ಗೆ ಆಗಲೇ ಗಮನ ಹರಿಸಿದ್ದರೆ ಜನ ಸಾಮಾನ್ಯರಿಗೆ ಇಂದು ಸಮಸ್ಯೆ ಆಗುತ್ತಿರಲಿಲ್ಲ ಎಂದು ಮೋದಿ ಹೇಳಿದ್ದರು.