ಗುರುಶಿಷ್ಯರು ಚಿತ್ರದ ಬಗ್ಗೆ ಇದುವರೆಗೆ ನೀಡಿದ ಮಾಹಿತಿಯಲ್ಲಿ ಚಿತ್ರದ ನಾಯಕಿ ಪಾತ್ರ ಮಾಡುತ್ತಿರುವ ಕಲಾವಿದೆಯ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ನೀಡಿರಲಿಲ್ಲ. ಇದೀಗ ನಾಯಕಿಯ ಹೆದರು ಘೋಷಣೆ ಮಾಡಲಾಗಿದೆ.
ಅಮ್ಮ ಐ ಲವ್ ಯು, ಪಡ್ಡೆ ಹುಲಿ, ಜಂಟಲ್ಮನ್ ಮುಂತಾದ ಚಿತ್ರಗಳಲ್ಲಿ ಯಶಸ್ಸು ಪಡೆದ ನಿಶ್ವಿಕಾ ನಾಯ್ಡು ಇದೀಗ ಗುರುಶಿಷ್ಯರು ಚಿತ್ರದ ನಾಯಕಿ. ನಿಶ್ವಿಕಾ ಅವರನ್ನು ಚಿತ್ರದ ನಾಯಕಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಸುಲಭವಾಗಿರಲಿಲ್ಲ. ನಾಯಕಿಯ ಆಯ್ಕೆ ಹೇಗಾಯಿತು ಅನ್ನೋ ವಿಷಯವನ್ನು ಕಿರುನಾಟಕದ ಮೂಲಕ ತಂಡ ಹಂಚಿಕೊಂಡಿದೆ.
30 ಹೊಸ ಕಲಾವಿದೆಯರು, ಕನ್ನಡ ಚಿತ್ರರಂಗದ ಅನೇಕ ನಟಿಯರು, ಪರಭಾಷಾ ನಟಿಯರನ್ನು ಕೂಡ ಗುರುಶಿಷ್ಯರು ಚಿತ್ರಕ್ಕೆ ಪರಿಗಣಿಸಲಾಗಿತ್ತು. ಕೊನೆಗೂ ಈ ಪಾತ್ರಕ್ಕೆ ಅತ್ಯಂತ ಸೂಕ್ತ ಕಲಾವಿದೆ ಎಂದು ನಿಶ್ವಿಕಾ ಅವರನ್ನು ಆಯ್ಕೆ ಮಾಡಲಾಯಿತು.
ಶರಣ್ ರವರು ಈ ಚಿತ್ರದಲ್ಲಿ ನಾಯಕ ನಟನಾಗಿ, ಒಬ್ಬ ದೈಹಿಕ ಶಿಕ್ಷಕನಾಗಿ ಪಾತ್ರವಹಿಸುತ್ತಿದ್ದಾರೆ. ಅವರ ಜೊತೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಸ್ವಯಂಕೃಷಿ ಉದ್ಯಮಿಯಾಗಿ ಪಾತ್ರ ಮಾಡಿದ್ದಾರೆ. ಗುರುಶಿಷ್ಯರು ಚಿತ್ರದ ಕಥೆ 1995 ರಲ್ಲಿ ನಡೆಯುವಂಥದ್ದು.
ಈಗಾಗಲೇ ಚಿತ್ರದ 60% ಚಿತ್ರೀಕರಣ ಮುಗಿಸಲಾಗಿದೆ. ಉಳಿದ ಭಾಗದ ಚಿತ್ರೀಕರಣ ಸದ್ಯದ ಕೋರೋನಾ ಲಾಕ್ಡೌನ್ ಮುಗಿದ ನಂತರ ಮಾಡಲು ಯೋಜಿಸಲಾಗಿದೆ.