ಬೆಂಗಳೂರು ಡಿ 30 : ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕೆಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಅನ್ನು ವಾಪಾಸ್ ಪಡೆಯಲಾಗಿದೆ ಎಂದು ವಾಟಾಳ್ ನಾಗರಾಜ್ ಅಧಿಕೃತ ಘೋಷಿಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದ ಬಳಿಕ ನಾಳೆ ವರ್ಷದ ಕೊನೆಯ ದಿನವಾಗಿರುವುದರಿಂದ ಬಂದ್ ಮಾಡಿದರೆ ವ್ಯಾಪರ ವಹಿವಾಟಿಗೆ ತೊಂದರೆ ಆಗುತ್ತದೆ ಎಂದು ಸಿಎಂ ಹೇಳಿದ್ದಾರೆ ಹಾಗಾಗಿ ರಾಜ್ಯದ ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟು ಬಂದ್ ಹಿಂತೆಗೆದುಕೊಂಡಿದ್ದೇವೆ ಎಂದು ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ
ಕರ್ನಾಟಕ ಬಂದ್ ಹಿಂಪಡೆಯುವಂತೆ ವಾಟಾಳ್ ನಾಗರಾಜ್ ಅವರ ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಸಿಎಂ ಭೇಟಿ ಬಳಿಕ ಮಾತನಾಡಿರುವ ವಾಟಾಳ್ ನಾಗರಾಜ್, ನಾಳೆಯ ಕರ್ನಾಟಕ ಬಂದ್ ಮುಂದೂಡಲು ನಿರ್ಧಾರ ಮಾಡಲಾಗಿದೆ. ಎಂಇಎಸ್ ಸಂಘಟನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ ಹಿನ್ನೆಲೆ ಬಂದ್ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
‘ನಾವು ನಿಮ್ಮ ಜೊತೆ ಇದ್ದೀನಿ. ಬಂದ್ ಮಾಡಬೇಡಿ’ ಅಂತ ಮುಖ್ಯಮಂತ್ರಿಗಳು ಪ್ರೀತಿ ಮತ್ತು ಅಭಿಮಾನದಿಂದ ಹೇಳಿದರು. ಬಂದ್ ಮಾಡಿದರೆ ರಾಜ್ಯಕ್ಕೆ ಏನೋ ಅನಾಹುತ ಆಗುತ್ತೆ ನಮ್ಮ ಮೇಲೆ ದಬ್ಬಾಳಿಕೆಯ ಮಾತುಗಳೆಲ್ಲ ಬಂದವು. ಯಾರ ಮಾತಿಗೂ ತಲೆ ಕೆಡಿಸಿಕೊಂಡಿರಲಿಲ್ಲ. ಇವತ್ತು ಬೆಳಿಗ್ಗೆಯಿಂದಲೂ ನಮ್ಮ ಒಕ್ಕೂಟದವರು ಬಂದ್ ಬೇಡ ಅಂತ ಒತ್ತಡ ತಂದಿದ್ರು. ಅವರ ಮಾತಿಗೂ ಬೆಲೆ ಕೊಡಬೇಕಾಯಿತು, ಮುಖ್ಯಮಂತ್ರಿಗಳ ಮಾತಿಗೂ ಬೆಲೆ ಕೊಡಬೇಕಾಯಿತು. ಹೀಗಾಗಿ ನಾಳೆ ನಡೆಯಬೇಕಾದ ಬಂದ್ ನಡೆಯುವುದಿಲ್ಲ. ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟು ಬಂದ್ ಹಿಂದೆ ಪಡೆದಿದ್ದೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.