Visit Channel

ನಾಯಕತ್ವವೇ ಇಲ್ಲದ ಈ ಸರ್ಕಾರ ಇದ್ದೇನು ಪ್ರಯೋಜನ, ವಿಸರ್ಜಿಸಿ: ಕುಮಾರಸ್ವಾಮಿ

hdk1614996494

ಬೆಂಗಳೂರು,ಜೂ.17: ರಾಜ್ಯ ಬಿಜೆಪಿಯಲ್ಲಿ ಉಲ್ಬಣಿಸಿರುವ ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ ಲೇವಡಿ ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯಲ್ಲಿ ನಾಯಕತ್ವ ಇದೆಯೋ?, ಇಲ್ಲವೋ? ಎಂಬ ಅನುಮಾನ ಮೂಡುತ್ತಿದೆ. ನಾಯಕತ್ವವೇ ಇಲ್ಲದ ಈ ಸರ್ಕಾರ ಇದ್ದೇನು ಪ್ರಯೋಜನ, ವಿಸರ್ಜಿಸಿ ಎಂದಿದ್ದಾರೆ.

ಬಿಜೆಪಿಯಲ್ಲಿನ ನಾಯಕತ್ವ ಗೊಂದಲದ ಪರಿಸ್ಥಿತಿಗೆ ತಕ್ಕಂತೆ ಬಸವಣ್ಣನವರ ವಚನದ ಮೂಲಕ ಟೀಕಿಸಿರುವ ಅವರು, “ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ, ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ – ಕೂಡಲ ಸಂಗಮದೇವ” ಎಂದು ಟೀಕಿಸುವ ಮೂಲಕ ಬಿಜೆಪಿಯಲ್ಲಿ ನಾಯಕತ್ವ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಅನುಮಾನಗಳು ಮೂಡುತ್ತಿವೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಸರ್ಕಾರದಲ್ಲಿ ನಾಯತ್ವ ಬಿಕ್ಕಟ್ಟು ಎದುರಾಗಿದೆಯಂತೆ, ನಾಯಕತ್ವ ಬದಲಿಸಲು ಸೂಕ್ತ ನಾಯಕನ ಹುಡುಕಾಟ ನಡೆದಿದೆಯಂತೆ, ಆದರೆ ಯಾವ ನಾಯಕರೂ ಸಿಗುತ್ತಿಲ್ಲವಂತೆ, ಬಿಜೆಪಿಯಲ್ಲಿ‌ ಸಿಎಂ ಆಗಬಲ್ಲ‌ ನಾಯಕನೇ ಇಲ್ಲವಂತೆ” ಇವೆಲ್ಲವೂ ಬಿಜೆಪಿಯೊಳಗಿನ ಚರ್ಚೆಗಳ ಮಾಧ್ಯಮಗಳ ವರದಿ. ನಾಯಕತ್ವವೇ ಇಲ್ಲದ ಈ ಸರ್ಕಾರ ಇದ್ದೇನು ಉಪಯೋಗ, ವಿಸರ್ಜಿಸಿ ಮೊದಲು ಎಂದಿದ್ದಾರೆ.

ನಾವಿಕನಿಲ್ಲದ ನಾವೆ, ಯಜಮಾನನಿಲ್ಲದ ಮನೆ, ನಾಯಕನಿಲ್ಲದ ಸರ್ಕಾರ ಇದು ಅಪಾಯಕಾರಿ. ಅದೂ ಸಾಂಕ್ರಾಮಿಕ ಕಾಲದಲ್ಲಿ ಮತ್ತಷ್ಟು ಅಪಾಯಕಾರಿ. ಈಗಿನ ಸರ್ಕಾರದ ನಾಯಕತ್ವ ಸರಿ ಇಲ್ಲ ಎಂದು ಬಿಜೆಪಿ ಶಾಸಕರೇ ಬಂಡೆದಿದ್ದಾರಂತೆ. ಇರುವವರನ್ನು ಬದಲಿಸಲು ನಾಯಕರ್ಯಾರೂ ಇಲ್ಲವಂತೆ. ಹಾಗಾಗಿ ಈ ಸರ್ಕಾರ ಜನರ ಪಾಲಿಗೆ ಅಪಾಯಕಾರಿಯಾಗಿದೆ ಎಂದರ್ಥ.

ದೇಶದ ಅಭಿವೃದ್ಧಿಗಾಗಿ ಸಮರ್ಥ ನಾಯಕತ್ವ ಪ್ರತಿಪಾದಿಸುವ ಬಿಜೆಪಿ, ನಾಯಕತ್ವವೇ ಇಲ್ಲದ ಈ ಸರ್ಕಾರವನ್ನು ಅದು ಹೇಗೆ ಸಹಿಸಿಕೊಂಡಿದೆ. ನಾಯಕತ್ವ ಸರಿ ಇಲ್ಲ ಎಂದು ಶಾಸಕರೇ ಹೇಳುತ್ತಿರುವಾಗ ನಾಯಕತ್ವ ಬದಲಿಸಲು ಏಕೆ ಇಷ್ಟು ತಿಣುಕಾಡುತ್ತಿದೆ. ಹಾಗೊಂದು ನಾಯಕತ್ವವೇ ಇಲ್ಲದ ಮೇಲೆ ಬಿಜೆಪಿ ಸರ್ಕಾರ ವಿಸರ್ಜಿಸಿ, ಅಧಿಕಾರದಿಂದ ದೂರ ಉಳಿಯಬಾರದೇಕೆ? ಎಂದು ಪ್ರಶ್ನಿಸಿದ್ದಾರೆ.

ಹಿಂದೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ‘ರಾಕ್ಷಸ ಸರ್ಕಾರ‘ವನ್ನು ಜನರ ಹಿತಕ್ಕಾಗಿ, ಅಭಿವೃದ್ಧಿಗಾಗಿ ಕೆಡವಿದ “ಸಮಾಜ ಸುಧಾರಕರು” ಇರುವ ಪಕ್ಷ ಬಿಜೆಪಿ. ಈಗ ನಾಯಕತ್ವವಿಲ್ಲದ ‘ಅಪಾಯಕಾರಿ ಸರ್ಕಾರ‘ದ ಬಗ್ಗೆ ಆ ಸಮಾಜ ಸುಧಾರಕರು ಸುಮ್ಮನಿರುವುದಾದರೂ ಹೇಗೆ. ಈ ಸಮಾಜ ಸುಧಾರಕರ ದಿವ್ಯ ಮೌನ ನನಗೆ ಆಶ್ಚರ್ಯ ತರಿಸುತ್ತಿದೆ ಎಂದು ಆತಂಕ ಉಂಟು ಮಾಡಿದೆ.

ಕೋವಿಡ್‌, ಲಾಕ್‌ಡೌನ್‌ಗಳಿಂದ ತತ್ತರಿಸಿರುವ ಕ್ಷೋಬೆಯ ಕಾಲವಿದು. ಆಳುವವರು ಅಂದುಕೊಂಡಷ್ಟು ನೆಮ್ಮದಿಯಿಂದ ಜನ ಬದುಕುತ್ತಿಲ್ಲ. ಅವರ ಬದುಕು ಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಅಧಿಕಾರ ದಾಹದ ವರ್ತನೆ ಜನರನ್ನು ಗೇಲಿ ಮಾಡುತ್ತಿದೆ. ಇದರ ಕಿಂಚಿತ್ತು ಪಾಪಪ್ರಜ್ಞೆಯಾದರೂ ಬಿಜೆಪಿಗೆ ಇರಬೇಕಿತ್ತು.

ಇನ್ನೊಂದೆಡೆ, ಬಿಜೆಪಿಯ ದುರಾಡಳಿತ ಕಂಡು ಜನರಿಗೆ ವೈರಾಗ್ಯ ಬಂದಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ‌. ಈ ದುರಾಡಳಿತ ಬರಲು, ಅದರಿಂದ ಜನರಿಗೆ ವೈರಾಗ್ಯ ಮೂಡಲು ಕಾರಣರಾರು? ಇದೇ ಕಾಂಗ್ರೆಸ್ ಅಲ್ಲವೇ? ಮೈತ್ರಿಕೂಟದಲ್ಲಿದ್ದೂ ಮಿತ್ರ ಪಕ್ಷದ ಮೇಲಿನ ದ್ವೇಷ, ಅಸೂಯೆಯಿಂದ ಶಾಸಕರನ್ನು ಓಡಿಹೋಗುವಂತೆ ಮಾಡಿದ್ದರ ಫಲವಿದು.

ಬಿಜೆಪಿ ಆಡಳಿತದಿಂದ ಈಗ ಜನರಿಗೆ ವೈರಾಗ್ಯ ಬಂದಿದೆ. ಈ ವೈರಾಗ್ಯದ ಹಿಂದಿನ ಶಕ್ತಿಯಾಗಿರುವ ಕಾಂಗ್ರೆಸ್ ಈಗ ಆತ್ಮಾವಲೋಕನ ಮಾಡಿಕೊಳ್ಳಲಿದೆಯೇ? ತಾನು ಮಾಡಿದ ತಪ್ಪಿನಿಂದ ಉಂಟಾದ ಅನಾಹುತದ ಬಗ್ಗೆ ಕಾಂಗ್ರೆಸ್ ಗೆ ಈಗ ಪಶ್ಚಾತ್ತಾಪ ಮೂಡಿದಂತಿದೆ. ಆದರೆ ಈ ಅನಾಹುತ ಹೊಣೆಗಾರ ಕಾಂಗ್ರೆಸ್ ಎಂಬುದನ್ನು ಮಾತ್ರ ಅದರ ನಾಯಕರು ಎಂದಿಗೂ ಮರೆಯಬಾರದು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.