ಕರ್ನಾಟಕಕ್ಕೆ(Karnataka) ಕರ್ನಾಟಕದೇ ಮಾಡೆಲ್ ಇರಲಿ. ಯುಪಿ ಮಾಡೆಲ್(UP Model) ಬೇಡವೇ ಬೇಡ ಎಂದು ಕೆಆರ್ ಮಾರುಕಟ್ಟೆ ಮೌಲ್ವಿ ಮಕ್ಸೂದ್ ಇಮ್ರಾನ್ ಹೇಳಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ದಿಗಾಗಿ ಮತ್ತು ಶಾಂತಿ ಸುವ್ಯವಸ್ಥೆಗಾಗಿ ಕರ್ನಾಟಕ ತನ್ನದೇ ಮಾಡೆಲ್ ತರಲಿ. ನಮಗೆ ಉತ್ತರಪ್ರದೇಶದ ಆಪರೇಷನ್ ಬುಲ್ಡೋಜರ್ ಬೇಡ. ನಾವು ಕಾನೂನಿನ ಅಡಿಯಲ್ಲಿ ಬದುಕಲು ಇಚ್ಚಿಸುತ್ತೇವೆ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ಹುಬ್ಬಳ್ಳಿ ಗಲಭೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಿಂದೂಗಳಿಗೆ ದೇವಸ್ಥಾನದ ಗರ್ಭಗುಡಿ ಇದ್ದಹಾಗೆ ಮುಸ್ಲಿಮರಿಗೆ ಕಾಬಾ ಶ್ರೇಷ್ಠವಾಗಿರುತ್ತದೆ. ಅದೇ ರೀತಿ ಗುಮ್ ಬಾದ್ ಹಜ್ರಾ ನಮಗೆ ಹಿಂದೂ ದೇವಾಲಯಗಳ ಗೋಪುರಕ್ಕೆ ಸಮ.
ದೇವಾಲಯಗಳಿವೆ ಇರುವಂತ ಪ್ರಾವಿತ್ರ್ಯತೆ ನಮ್ಮ ಕಾಬಾಕ್ಕೂ ಇದೆ. ಅದಕ್ಕೆ ಧಕ್ಕೆಯಾದಾಗ ಅಸಮಾಧಾನ ಉಂಟಾಗಿ ಗಲಾಟೆ ಆಗಿದೆ. ಕಾಬಾದ ಮೇಲೆ ಕೇಸರಿ ಬಣ್ಣದ ಧ್ವಜ ಹಾರಿಸಿದ್ದು ನಮಗೆ ಬೇಸರವಲ್ಲ. ಕಾಬಾದ ಮೇಲೆ ಯಾವುದೇ ಬಣ್ಣದ ಬಾವುಟ ಸೇರಿದಂತೆ ಏನೇ ಹಾಕಿದ್ರೂ ತಪ್ಪು ಎಂದರು. ಇನ್ನು ಗಲಾಟೆ ಮಾಡಿದ ಗುಂಪು ಸಹ ತಪ್ಪು ಮಾಡಿದೆ. ತಪ್ಪಾಗಿದ್ದರೆ ಅದರ ವಿರುದ್ದ ಕಾನೂನು ಹೋರಾಟ ಮಾಡಬೇಕಿತ್ತು. ಪೋಲಿಸರಿಗೆ ದೂರು ನೀಡಬೇಕು, ಮೌಲ್ವಿಗಳ ಗಮನಕ್ಕೆ ತರಬೇಕು.
ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು, ಪೋಲಿಸ್ ಠಾಣೆಯ ಮೇಲೆ ದಾಳಿ ಮಾಡುವುದು, ದಾಂಧಲೆ ನಡೆಸುವುದು ಅಕ್ಷಮ್ಯ ಅಪರಾಧ. ಇನ್ನು ಈ ಘಟನೆ ಪೂರ್ವ ನಿಯೋಜಿತವಲ್ಲ. ಇದೊಂದು ಸುಳ್ಳು ಸಂಗತಿ. ಈ ರೀತಿಯ ಗಲಭೆಗಳ ನಿಯಂತ್ರಣಕ್ಕೆ ಧರ್ಮ ಗುರುಗಳ ನೇತೃತ್ವದ ಒಂದು ಕಮಿಟಿ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ ಎಂದರು.