ಹೇಗೆ ಬೆಳೆ ಎಲ್ಲಾ ಸುಟ್ಟು ಹೋಗಿದೆ ನೋಡಿ. ಜೋಳ ಬೆಳೆಯಂತು ಸಂಪೂರ್ಣ ನಾಶವಾಗಿದೆ. ರೈತ ಸಾಲ ಸೋಲ ಮಾಡಿ ಬೆಳೆದ ಬೆಳೆ ಸಂಪೂರ್ಣ ಹಾಳಾಗಿದೆ. ಇದಕ್ಕೆ ಕಾರಣ ಏನು ಗೊತ್ತಾ? ಕಳೆದ 40 ದಿನಗಳಿಂದ ಮಳೆ ಬಾರದ ಕಾರಣ ಬೆಳೆದ ಬೆಳೆ ಬಾಡಿ ಹೋಗುತ್ತಿದೆ.
ಅಕಾಲಿಕವಾಗಿ ಮಳೆ ಕೈಕೊಟ್ಟ ಕಾರಣ ರೈತರು ಕಂಗಾಲಾಗಿದ್ದಾರೆ. ರಾಜ್ಯದ್ಯಾಂತ ಈ ಬಾರಿ ಚೆನ್ನಾಗಿ ಮಳೆಯಾದ ಕಾರಣ ಕೊಪ್ಪಳ ಜಿಲ್ಲೆ ಗಂಗಾವತಿಯ ಮಲ್ಲಾಪುರ ಗ್ರಾಮದ ರೈತರು ಬಹಳ ಉತ್ಸಾಹದಿಂದ, ನೂರಾರು ಕನಸು ಕಟ್ಟಿ, ಕೈತುಂಬಾ ಸಾಲ ಮಾಡಿ ಬಿತ್ತನೆ ಮಾಡಿದ್ರು. ಆರಂಭದಲ್ಲಿ ಮಳೆ ಚೆನ್ನಾಗಿಯೇ ಬಿತ್ತು. ಆದ್ರೆ ಆ ಬಳಿಕ ಮಳೆರಾಯನ ಸುದ್ದಿಯೇ ಇಲ್ಲ ಅನ್ನೋದು ರೈತರ ಅಳಲು
ಕಳೆದ 40 ದಿನಗಳಿಂದ ಹನಿ ಮಳೆಯೂ ಬಾರದ ಕಾರಣ ಬೆಳೆ ಸುಟ್ಟು ಹೋಗುತ್ತಿದೆ. ತೆನೆ ಕಟ್ಟುವ ಸಮಯದಲ್ಲೇ ಮಳೆ ಕೈಕೊಟ್ಟ ಕಾರಣ ಈ ವರ್ಷ ಒಂದು ರೂಪಾಯಿಯ ಆದಾಯ ಬರಲ್ಲ. ಹೀಗಾದ್ರೆ ರೈತ ಬದುಕುವುದೇ ಕಷ್ಟ ಆಗುತ್ತೆ ಅಂತಾರೆ ಇವರು.
ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮದ ನೂರಾರು ಎಕರೆ ಬೆಳೆ ಮಳೆ ಇಲ್ಲದೆ ಒಣಗಿ ಹೋಗಿದೆ. ಅದ್ರಲ್ಲೂ ಮೆಕ್ಕೆಜೋಳ, ಸಜ್ಜೆ ಬೆಳೆದ ಕಂಗಾಲಾಗಿ ಹೋಗಿದ್ದಾನೆ. ಸರ್ಕಾರ ರೈತರ ಸಂಕಷ್ಟ ಅರಿತು ತುರ್ತಾಗಿ ಪರಿಹಾರ ಘೋಷಿಸಬೇಕು. ಇಲ್ಲದಿದ್ರೆ ರೈತರು ನೇಣಿಗೆ ಕೊರಳು ಕೊಡಬೇಕಾಗುತ್ತೆ ಅನ್ನೋದು ರೈತರ ಆತಂಕ.
ಕೊರೋನಾ ಸಂಕಷ್ಟದಿಂದ ನರಳುತ್ತಿರುವ ರೈತರಿಗೆ ಮಳೆ ಅಭಾವ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ರೈತರ ನೋವಿಗೆ ಸ್ಪಂದಿಸಲಿ. ಆದಷ್ಟು ಬೇಗ ಪರಿಹಾರ ಘೋಷಿಸಿ ನೊಂದ ಅನ್ನದಾತನಿಗೆ ಆಸರೆಯಾಗಲಿ ಅನ್ನೋದು ವಿಜಯಟೈಮ್ಸ್ ಆಶಯ.
ಗಂಗಾವತಿಯಿಂದ ರವಿ ಸಿಟಿಜನ್ ಜರ್ನಲಿಸ್ಟ್ , ವಿಜಯಟೈಮ್ಸ್