ಮೈಸೂರು,ಜೂ.16: ನಾಯಕತ್ವ ಬದಲಾವಣೆ ಕುರಿತು ಚೆರ್ಚಿಸುವ ಸಮಯ ಇದಲ್ಲ. ಯೋಗೇಶ್ವರ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಬಾರದು. ಏನಾದ್ರೂ ಹೇಳುವುದಿದ್ದರೆ ಸ್ಪಷ್ಟವಾಗಿ ಹೇಳಲಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮನ ಹಿನ್ನಲೆ, ಉಸ್ತುವಾರಿ ಜೊತೆ ಇಂದು ಸಂಜೆ ಸಭೆ ಇದೆ. ಎಲ್ಲರೂ ಸಭೆಗೆ ಬರುವಂತೆ ಆಹ್ವಾನ ಇದೆ. ಆದರೆ ಪ್ರತ್ಯೇಕವಾಗಿ ಮಾತನಾಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ನಮ್ಮ ಪಕ್ಷದಲ್ಲಿ ಹೊರಗೆನಿಂದ ಬಂದವರು ಒಳಗಿಂದ ಬಂದವರು ಎಂಬ ಪ್ರಶ್ನೆಯೇ ಇಲ್ಲ. ಮನೆಗೆ ಒಂದು ಸಾರಿ ಸೊಸೆ ಬಂದ ಮೇಲೆ ಮೊಳೆ ಬಡಿದು ಬಂದಾ ಹಾಗೆ. ಆ ರೀತಿಯ ಯಾವ ಭಾವನೆಗಳು ಇಲ್ಲ. ಮನೆಯಲ್ಲಿ ಅಣ್ಣ ತಮ್ಮಂದಿರ ನಡುವೆ ವ್ಯತ್ಯಾಸಗಳು ಇರುತ್ತದೆ. ಟೀಕೆ, ಟಿಪ್ಪಣಿಗಳು ಸಹಜ, ಐದು ಬೆರಳುಗಳು ಸರಿ ಇರಲ್ಲ. ಇಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಜ್ಯಕ್ಕೆ ಭೇಟಿ ನಿಡಲಿದ್ದು ಅಸಮಾಧಾನಗಳನ್ನು ಶಮನ ಮಾಡಲಿದ್ದಾರೆ ಎಲ್ಲಾ ಗೊಂದಲಕ್ಕೂ ತೆರೆ ಎಳೆಯಲಿದ್ದಾರೆ ಎಂದರು
ಯಡಿಯೂರಪ್ಪ ಪರವಾಗಿ ಸಹಿ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ ಪಾಟೀಲ್, ಇಂತಹ ಸಂಧರ್ಭದಲ್ಲಿ ಈ ರೀತಿಯ ಯಾವ ಬೆಳವಣಿಗೆಗಳು ಸರಿಯಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ. ಪಕ್ಷದ ಚೌಕಟ್ಟಿನಲ್ಲೇ ಚರ್ಚೆಯಾಗಬೇಕು. ಹಾದಿ ಬೀದಿಯಲ್ಲಿ ಚರ್ಚೆ ನಡೆಸಬಾರದು. ಬಾಂಬೆ ಟೀಮ್ ಮೊದಲು ಇತ್ತು, ಈಗ ಇಲ್ಲ ಎಂದು ಬಿಸಿ ಪಾಟೀಲ್ ತಿಳಿಸಿದರು.
ಈಗಲೂ 16 ಜನರಿಂದಲೇ ಗೊಂದಲ ಎನ್ನುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಬಿ.ಸಿ ಪಾಟೀಲ್, ಆ ರೀತಿ ಏನೇ ಇದ್ದರೂ ಇವತ್ತು ಈಶ್ವರಪ್ಪ ಸಿಗ್ತಾರೆ ಮಾತಾಡುತ್ತೇನೆ. ಈಶ್ವರಪ್ಪ ಯಾವತ್ತು ನಮ್ಮ ಪರ ಮಾತಾಡಿಕೊಂಡು ಬಂದಿದ್ದಾರೆ. ಅವರು ಆ ರೀತಿ ಮಾತನಾಡಲು ಸಾಧ್ಯವಿಲ್ಲ ಎಂದು ಸಚಿವ ಬಿಸಿ.ಪಾಟೀಲ್ ಹೇಳಿದರು.