ರಷ್ಯಾ ವಿರುದ್ದ ಪರೋಕ್ಷವಾಗಿ ಯುದ್ದ ಸಾರಿರುವ ಅಮೆರಿಕ ಇದೀಗ ಹಣಕಾಸಿನ ಮೇಲೆ ನಿರ್ಬಂಧ ವಿದಿಸಿದೆ. ರಷ್ಯಾ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಸರಣಿ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣಕಾರಿ ಧೋರಣೆಯನ್ನು ತಾಳಿರುವುದು ಇದಕ್ಕೆ ಕಾರಣ. ಪೂರ್ವ ಉಕ್ರೇನ್ನ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಘೋಷಿಸಲು ಮುಂದಾಗಿರುವ ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬೈಡನ್, ರಷ್ಯಾ ಆಕ್ರಮಣಕಾರಿ ಆಗಿ ವರ್ತಿಸುತ್ತಿದೆ. ಹೀಗಾಗಿ ಎದುರಾಗಿರುವ ಸವಾಲುಗಳ ಬಗ್ಗೆ ನಮ್ಮ ದೃಷ್ಟಿ ಸ್ಪಷ್ಟವಾಗಿದೆ ಎಂದಿದ್ದಾರೆ.
ಅಮೆರಿಕದ ಮಿತ್ರ ರಾಷ್ಟ್ರಗಳು ಮತ್ತು ಪಾಲುದಾರ ರಾಷ್ಟ್ರಗಳೊಂದಿಗೆ ನಿಕಟವಾಗಿ ಸಂಯೋಜಿಸಿ ನಂತರ ನಿರ್ಬಂಧ ಹೇರಲಾಗಿದೆ. ರಷ್ಯಾ ಒಂದು ವೇಳೆ ಆಕ್ರಮಣಕಾರಿ ಧೋರಣಿ ಹೆಚ್ಚಿಸಿದರೆ, ನಿರ್ಬಂಧಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಬೈಡನ್ ಎಚ್ಚರಿಕೆ ನೀಡಿದ್ದಾರೆ.
ರಷ್ಯಾದ ಎರಡು ದೊಡ್ಡ ಹಣಕಾಸು ಸಂಸ್ಥೆಗಳಾದ ವಿಇಬಿ ಮತ್ತು ಅವರ ಮಿಲಿಟರಿ ಬ್ಯಾಂಕುಗಳ ಮೇಲೆ ಪೂರ್ಣ ನಿರ್ಬಂಧವನ್ನು ಜಾರಿಗೊಳಿಸುತ್ತೇವೆ. ರಷ್ಯಾದ ಸಾರ್ವಭೌಮ ಸಾಲದ ಮೇಲೂ ಸಮಗ್ರ ನಿರ್ಬಂಧಗಳನ್ನು ಹೇರುತ್ತಿದ್ದೇವೆ. ಅಂದರೆ ನಾವು ರಷ್ಯಾಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳ ಹಣಕಾಸು ಸೌಲಭ್ಯವನ್ನು ಕಡಿತಗೊಳಿಸುತ್ತಿದ್ದೇವೆ. ಇನ್ನು ಮುಂದೆ ರಷ್ಯಾಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಹಣಕಾಸು ನೆರವು ಸಿಗುವುದಿಲ್ಲ ಮತ್ತು ನಮ್ಮ ಮಾರುಕಟ್ಟೆಗಳಲ್ಲಿ ಅಥವಾ ಯುರೋಪಿಯನ್ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡಲು ಅದಕ್ಕೆ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಯುದ್ದ ಭೀತಿ ಭಾರತೀಯರು ಸುರಕ್ಷಿತ :
ರಷ್ಯಾ-ಉಕ್ರೇನ್ ಉದ್ವಿಗ್ನತೆಯ ನಡುವೆ 242 ಭಾರತೀಯ ವಿದ್ಯಾರ್ಥಿಗಳು ಮಂಗಳವಾರ ಸಂಜೆ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಉಕ್ರೇನ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ನಾಗರಿಕರ ಸ್ಥಳಾಂತರ ಕಾರ್ಯಾಚರಣೆಯನ್ನು ಭಾರತ ಪ್ರಾರಂಭಿಸಿದೆ.
ಈ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲು ಭಾರತವು ಡ್ರೀಮ್ಲೈನರ್ B-787 ವಿಮಾನವನ್ನು ನಿಯೋಜಿಸಿದೆ. ಇದರ ಅಡಿಯಲ್ಲಿ ಉಕ್ರೇನ್ನ ಖಾರ್ಕಿವ್ನಿಂದ ನವದೆಹಲಿಗೆ ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ.
ಉಕ್ರೇನ್ನಲ್ಲಿ ಓದುತ್ತಿರುವ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ನೀರವ್ ಪಾಟೀಲ್ ಭಾರತಕ್ಕೆ ಬಂದಿಳಿದ ಬಳಿಕ ಮಾತನಾಡಿ, ನಾನು ವಾಸಿಸುವ ಪ್ರದೇಶದ ಸುತ್ತಮುತ್ತ ಪರಿಸ್ಥಿತಿ ಸಾಮಾನ್ಯವಾಗಿದೆ. ವಿಶ್ವವಿದ್ಯಾನಿಲಯವು ಆನ್ಲೈನ್ನಲ್ಲಿ ಅಧ್ಯಯನವನ್ನು ಪ್ರಾರಂಭಿಸಿದೆ. ಆದ್ದರಿಂದ ನಮಗೆ ಈಗ ಹೆಚ್ಚು ಚಿಂತೆ ಇಲ್ಲ ಎಂದಿದ್ದಾರೆ.
ಮತ್ತೋರ್ವ ವಿದ್ಯಾರ್ಥಿ ಕೃಷ್ಣ ಮಾತನಾಡಿ, “ನಾನು ಉಕ್ರೇನ್-ರಷ್ಯಾ ಗಡಿಯಿಂದ 900 ಕಿ.ಮೀ ದೂರದಲ್ಲಿ ವಾಸಿಸುತ್ತಿದ್ದೇನೆ. ನಾವು ಸುಮಾರು ಐದರಿಂದ ಆರು ವಿದ್ಯಾರ್ಥಿಗಳು ಗುಜರಾತ್ ನಿವಾಸಿಗಳು. ನಮ್ಮ ತಂದೆ-ತಾಯಿ ತುಂಬಾ ಚಿಂತಿತರಾಗಿದ್ದರು. ಅದಕ್ಕಾಗಿಯೇ ನಾವು ಭಾರತಕ್ಕೆ ಮರಳಬೇಕಾಯಿತು” ಎಂದಿದ್ದಾರೆ.
ಫೆಬ್ರವರಿ 22, 24 ಮತ್ತು 26 ರಂದು ಭಾರತ ಮತ್ತು ಉಕ್ರೇನ್ ನಡುವೆ ವಿಮಾನಗಳನ್ನು ನಿರ್ವಹಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ. ಏರ್ ಇಂಡಿಯಾ ಬುಕಿಂಗ್ ಕಚೇರಿಗಳು, ವೆಬ್ಸೈಟ್, ಕಾಲ್ ಸೆಂಟರ್ಗಳು ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್ಗಳ ಮೂಲಕ ವಿಮಾನ ಟಿಕೆಟ್ಗಳ ಬುಕಿಂಗ್ ತೆರೆದಿರುತ್ತದೆ. ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಪ್ರಕಾರ, ಫೆಬ್ರವರಿ 25, 27 (ಎರಡು ವಿಮಾನಗಳು) ಮತ್ತು ಮಾರ್ಚ್ 6 ರಂದು ಕೈವ್ನಿಂದ ದೆಹಲಿಗೆ ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸುತ್ತವೆ.