ಬಿಜೆಪಿ(BJP) ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ(Nupur Sharma), ಪ್ರವಾದಿ ಮೊಹಮ್ಮದ್ ಪೈಗಂಬರ್(Mohammud Paigambar) ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಅಂತರಾಷ್ಟ್ರೀಯ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ ಭಾರತವನ್ನು ಟೀಕಿಸಿದೆ.

ಇಸ್ಲಾಮಿಕ ರಾಷ್ಟ್ರಗಳ ಹೇಳಿಕೆಗೆ ಭಾರತವೂ ತಿರುಗೇಟು ನೀಡಿದ್ದು, “ಒರ್ವ ವ್ಯಕ್ತಿಯ ಅಭಿಪ್ರಾಯ ಭಾರತ ಸರ್ಕಾರದ ಅಭಿಪ್ರಾಯವಾಗಲಾರದು” ಎಂದು ಸ್ಪಷ್ಟಪಡಿಸಿದೆ. ಈ ನಡುವೆ ವಿರೋಧ ಪಕ್ಷಗಳು ಬಿಜೆಪಿಯನ್ನು ಹಣಿಯಲು ಇದನ್ನೇ ದಾಳವಾಗಿ ಬಳಸಿಕೊಳ್ಳಲು ಮುಂದಾಗಿರುವಂತೆ ಕಾಣುತ್ತಿದೆ. ಭಾರತ ಸರ್ಕಾರ(Indian Government) ನೂಪುರ್ ಶರ್ಮಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದರು, ವಿರೋಧ ಪಕ್ಷಗಳು ಬಿಜೆಪಿಯನ್ನು ಟೀಕಿಸುವ ಭರದಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸುತ್ತಿವೆ.
ಸದ್ಯ ವಿರೋಧ ಪಕ್ಷಗಳು ನೀಡುತ್ತಿರುವ ಹೇಳಿಕೆಗಳಿಂದ ಬಿಜೆಪಿಗೆ ಆಗುತ್ತಿರುವ ಹಾನಿಗಿಂತ ಭಾರತಕ್ಕೆ ಹಾನಿಯಾಗುತ್ತಿದೆ ಎಂಬ ಸಾಮಾನ್ಯ ತಿಳುವಳಿಕೆಯೂ ವಿರೋಧ ಪಕ್ಷಗಳಿಗೆ ಇಲ್ಲದಂತಾಗಿದೆ. ಆಂತರಿಕ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ತಿಕ್ಕಾಟ ಸ್ವಾಗತಾರ್ಹ. ಆದರೆ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು, ತಮ್ಮ ರಾಜಕೀಯ ವೈರತ್ವವನ್ನು ಮರೆತು ಭಾರತವನ್ನು ಪ್ರತಿನಿಧಿಸಬೇಕಾಗುತ್ತದೆ. ಸದ್ಯ ನೂಪುರ್ ಶರ್ಮಾ ಹೇಳಿಕೆಯನ್ನಿಟ್ಟುಕೊಂಡು ಭಾರತವನ್ನು ಟೀಕಿಸುತ್ತಿರುವ ಇಸ್ಲಾಮಿಕ್ ದೇಶಗಳಿಗೆ ನಾವೆಲ್ಲರೂ ಒಟ್ಟಾಗಿ ಉತ್ತರ ನೀಡಬೇಕಿದೆ.

ಏಕೆಂದರೆ ಅವರು ಟೀಕಿಸುತ್ತಿರುವುದು ಬಿಜೆಪಿಯನ್ನಲ್ಲ, ಬದಲಾಗಿ ಭಾರತವನ್ನು ಟೀಕಿಸುತ್ತಿದ್ದಾರೆ. ನನ್ನ ಭಾರತ ಎಲ್ಲ ಧರ್ಮಗಳಿಗೆ ಸಮಾನ ಅವಕಾಶ ಮತ್ತು ಪ್ರಾತಿನಿಧ್ಯ ನೀಡಿದೆ ಎಂದು ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಇಸ್ಲಾಮಿಕ್ ರಾಷ್ಟ್ರಗಳಿಗೆ ತಿರುಗೇಟು ನೀಡಬೇಕಿದೆ. ಬಿಜೆಪಿಯ ವಕ್ತಾರೆ ನೀಡಿದ ಹೇಳಿಕೆ ಇಡೀ ಭಾರತೀಯರ ಹೇಳಿಕೆಯಾಗಲು ಸಾಧ್ಯವಿಲ್ಲ ಎಂಬ ಸಾಮಾನ್ಯ ತಿಳುವಳಿಕೆಯನ್ನು ಇಸ್ಲಾಮಿಕ್ ರಾಷ್ಟ್ರಗಳಿಗೆ ನೀಡಬೇಕಿದೆ.
ಕ್ಷುಲ್ಲಕ ಹೇಳಿಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿರುವುದು ಭಾರತದ ವಿರುದ್ದ ಹೆಣೆದಿರುವ ಷಡ್ಯಂತ್ರದಂತೆ ಭಾಸವಾಗುತ್ತಿದೆ. ಭಾರತವನ್ನು ಟೀಕಿಸುವವರ ವಿರುದ್ದ ಭಾರತೀಯರೆಲ್ಲರೂ ಒಂದಾಗಬೇಕಿದೆ.