- ಮಹಿಳೆಯರು 40 ವರ್ಷದ ನಂತರ ತಪ್ಪದೇ ಪಾಲಿಸಬೇಕಾದ ಪೌಷ್ಟಿಕ ಆಹಾರ ಕ್ರಮ
- ತಿಂದು ಕೆಟ್ಟವರಲ್ಲ ಉತ್ತಮ ಆಹಾರವನ್ನ
- ಮೂಳೆಗಳಿಂದ ಸ್ನಾಯುಗಳವರೆಗೆ ಆಹಾರವೇ ಔಷಧವಾಗಬಲ್ಲದು
ಬಾಲ್ಯದಿಂದ ವೃದ್ಧಾಪ್ಯದ ತನಕ ಮಹಿಳೆಯರ ಜೀವನದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. ಅದರಲ್ಲೂ ಹೆರಿಗೆಯ ನಂತರದಲ್ಲಿ ಅಕ್ಷರಶಃ ಹಲವಾರು ಮಹಿಳೆಯರು ದೈಹಿಕವಾಗಿ ಮಾತ್ರವಲ್ಲ,
ಹಾರ್ಮೋನಲ್, ಮಾನಸಿಕವಾಗಿ ದಣಿಯುತ್ತಾರೆ. ಅವರ ಈ ದಣಿವು ಚಯಾಪಚಯ ಕ್ರಿಯೆಗೂ ನೇರವಾದ ಪ್ರಭಾವ ಬೀರುತ್ತದೆ. ಅದರಲ್ಲೂ 40 ವರ್ಷ ವಯಸ್ಸು ಎನ್ನುವುದು ‘Turning Point’ ಎಂದು ಹೇಳಬಹುದು.
ಏಕೆಂದರೆ, ಋತುಬಂಧ (Menopause) ಹಂತ ಹತ್ತಿರವಾಗುತ್ತೆ, ದೇಹದ ಜೀವಶಕ್ತಿ ನಿಧಾನವಾಗುತ್ತದೆ ಮತ್ತು ಪ್ರತಿರೋಧಕ ಶಕ್ತಿ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಇಂಥ ಸಮಯದಲ್ಲಿ ದೇಹವನ್ನು ಒಳಗಿಂದ ಬಲಪಡಿಸುವುದು ತುಂಬಾ ಅವಶ್ಯಕ.
ಕಬ್ಬಿಣ ಅಂಶ: ಶಕ್ತಿಯ ಮೂಲ
ಮಹಿಳೆಯರಲ್ಲಿ 40ರ ನಂತರ ರಕ್ತಹೀನತೆ ಸಾಮಾನ್ಯ. ಇದು ದಣಿವು, ತಲೆಸುತ್ತು, ಮೂರ್ಛೆ ಮುಂತಾದ ಸಮಸ್ಯೆಗಳಿಗೆ ದಾರಿ ಮಾಡಬಹುದು.
ಹಸಿರು ಎಲೆ ತರಕಾರಿಗಳು, ಬೀಜಗಳು , ಬೀನ್ಸ್, ಕಡಲೆ ಬೇಳೆ ಇತ್ಯಾದಿಗಳ ಸೇವನೆ ಮೂಲಕ ಕಬ್ಬಿಣಾಂಶವನ್ನು ಪಡೆಯಬಹುದು.

ಜೊತೆಗೆ, ಕಿತ್ತಳೆ, ನಾರಿಂಗೆ ಹಣ್ಣುಗಳು ವಿಟಮಿನ್ ಸಿ ಪೂರೈಕೆ ನೀಡುತ್ತವೆ, ಇದು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಸುಗಮಗೊಳಿಸುತ್ತದೆ.
ಪ್ರೋಟೀನ್: ಸ್ನಾಯುಗಳ ಶಕ್ತಿ
ಈ ವಯಸ್ಸಿನಲ್ಲಿ ಸ್ನಾಯುಗಳ ದ್ರವ್ಯರಾಶಿ ನಿಧಾನವಾಗಿ ಕಡಿಮೆಯಾಗುತ್ತದೆ – ಇದನ್ನು “ಸಾರ್ಕೊಪೆನಿಯಾ” ಎನ್ನುತ್ತಾರೆ.
ಇದನ್ನು ತಡೆಯಲು ಮೊಟ್ಟೆ, ಕಡಲೆಬೇಳೆ, ತೊಗರಿ ಬೇಳೆ, ಕಡಜ ಬೇಳೆ ಮತ್ತು ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ ಹಾಗೂ ಚೀಸ್ ದಿನನಿತ್ಯ ಸೇವನೆ ಮಾಡಬೇಕು. ಪ್ರೋಟೀನ್ ಹೆಚ್ಚು ಇರುವ ಆಹಾರ ದೇಹದ ಚಲನೆ, ಬಲ ಮತ್ತು ಶಕ್ತಿ ಕಾಪಾಡುತ್ತದೆ.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ: ಮೂಳೆಗಳ ರಕ್ಷಕರು
ಸಾಮಾನ್ಯವಾಗಿ ಮಹಿಳೆಯರಿಗೆ ಋತುಬಂಧದ ನಂತರ ಮೂಳೆಗಳು ಬಲಹೀನವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಇದನ್ನು ತಡೆಯಲು ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಬಹುಮುಖ್ಯ.
ರಾಗಿ, ಹಾಲು, ಎಲೆ ತರಕಾರಿಗಳು, ಬಾದಾಮಿ ಮುಂತಾದವುಗಳಿಂದ ಕ್ಯಾಲ್ಸಿಯಂ ಸಿಗುತ್ತದೆ. ವಿಟಮಿನ್ ಡಿ ಗೆ ಉತ್ತಮ ಮೂಲ ಎಂದರೆ ಸೂರ್ಯನ ಬೆಳಕು ಇದರ ಜೊತೆಗೆ, ಮೀನು, ಅಣಬೆ, ಮೊಟ್ಟೆ ಹಳದಿ ಲೋಳೆ ಕೂಡ ಉತ್ತಮ ಆಯ್ಕೆ ಆಗಿರುತ್ತದೆ.
ಕಡಿಮೆ ಕ್ಯಾಲೋರಿ, ಹೆಚ್ಚು ಫೈಬರ್
ಚಯಾಪಚಯ ಕಡಿಮೆಯಾಗುತ್ತಿದ್ದಂತೆ ತೂಕವೃದ್ಧಿಯ ಸಾಧ್ಯತೆ ಇರುತ್ತದೆ. ಇದನ್ನು ನಿಯಂತ್ರಿಸಲು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಫೈಬರ್ ಹೊಂದಿರುವ ಆಹಾರ ಬೇಕು.
ಸಜ್ಜೆ, ಜೋಳ, ರಾಗಿ, ಹಾಗೂ ಹಸಿರು ತರಕಾರಿಗಳು ದೀರ್ಘ ಕಾಲ ಹೊಟ್ಟೆ ತುಂಬಿರುವ ಅನುಭವ ನೀಡುತ್ತವೆ ಮತ್ತು ಜೀರ್ಣಕ್ರಿಯೆ ಸಹ ಸುಗಮಗೊಳಿಸುತ್ತವೆ.
ಹಾಗಾಗಿ ಮಹಿಳೆಯರು 40 ವರ್ಷಗಳ ನಂತರ ಅತಿಯಾದ ಉಪ್ಪು, ಸಕ್ಕರೆ, ಎಣ್ಣೆಯ ಆಹಾರ, ಅಲ್ಕೋಹಾಲ್, ಕೆಫಿನ್ ಸೇವನೆ ತಕ್ಷಣ ಕಡಿಮೆ ಮಾಡಬೇಕು.
ಇವು ದೇಹದ ಹಾರ್ಮೋನ್ ಸಮತೋಲನವನ್ನು ಕೆಡಿಸುತ್ತವೆ ಮತ್ತು ಋತುಬಂಧವನ್ನು ಇನ್ನಷ್ಟು ಕಠಿಣಗೊಳಿಸುತ್ತವೆ.
ಇದನ್ನು ಓದಿ : ಬ್ಯಾನ್ ಮಾಡಿದ್ದ ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ಮತ್ತೆ ಬಳಕೆಗೆ, ಆಹಾರ ಸುರಕ್ಷತಾ ಇಲಾಖೆ ಹದ್ದಿನ ಕಣ್ಣು
ಹಾಗಾಗಿ ದಿನನಿತ್ಯದ ಆಹಾರ ಸೇವನೆಯಲ್ಲಿ ಚಿಕ್ಕ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ದೀರ್ಘಕಾಲದ ಶಕ್ತಿ, ಸಮತೋಲನ ಮತ್ತು ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ನಿಮ್ಮದಾಗುವುದರಲ್ಲಿ ಎರಡು ಮಾತಿಲ್ಲ.