ನವದೆಹಲಿ ಅ.7: 15 ವರ್ಷಕ್ಕಿಂತ ಹೆಚ್ಚು ಹಳೆಯದಾದ ವಾಹನಗಳನ್ನು ರಸ್ತೆಗಿಳಿಸಿದರೆ, ಎಂಟು ಪಟ್ಟು ದಂಡ ವಿಧಿಸುವ ಬಗ್ಗೆ ಕೇಂದ್ರ ಸರಕಾರ ಹೊಸ ಕಾನೂನು ತರುತ್ತಿದ್ದು, ಮುಂದಿನ ವರ್ಷ ಎಪ್ರಿಲ್ ತಿಂrಳಿಂದಲೇ ಹೊಸ ಕಾನೂನು ಬರಲಿದೆ.
ಜೊತೆಗೆ 8 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳು ರಸ್ತೆಗಳಲ್ಲಿ ಸಂಚಾರವನ್ನು ಮುಂದುವರಿಸಲು ಫಿಟ್ನೆಸ್ ಪರೀಕ್ಷೆಯನ್ನು ತೆರವುಗೊಳಿಸುವುದು ಕಡ್ಡಾಯವಾಗಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ ಅಂತಹ ವಾಹನವನ್ನು ಕಡ್ಡಾಯ ಸ್ಕ್ರ್ಯಾಪ್ ಮಾಡಬೇಕಾಗುತ್ತದೆ.
ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರದಿಂದ ಎಲ್ಲ ರಾಜ್ಯಗಳಿಗೂ ನೋಟಿಫಿಕೇಶನ್ ಹೊರಡಿಸಲಾಗಿದ್ದು, ಹೊಸ ಕಾನೂನು ಪ್ರಕಾರ 15 ವರ್ಷಗಳ ಹಿಂದಿನ ಕಾರನ್ನು ರಿನೀವಲ್ ಮಾಡಿಸಲು ನಿಗದಿತ ಶುಲ್ಕಕ್ಕಿಂತ ಎಂಟು ಪಟ್ಟು ಮೊತ್ತವನ್ನು ಪ್ರಾಧಿಕಾರಕ್ಕೆ ಕೊಡಬೇಕಾಗುತ್ತದೆ. ಬಸ್, ಲಾರಿ ಇನ್ನಿತರ ಘನ ವಾಹನಗಳ ಮಾಲೀಕರು ಕೂಡ ಇದೇ ಮಾದರಿಯಲ್ಲಿ ತಮ್ಮ ವಾಹನಗಳ ಲೈಸನ್ಸ್ ರಿನೀವಲ್ ಮಾಡಿಸಲು ಎಂಟು ಪಟ್ಟು ಹೆಚ್ಚು ಶುಲ್ಕ ತರಬೇಕಾಗುತ್ತದೆ.
ಇದರ ಜೊತೆಗೆ ಹಳೆಯ ವಾಹನಗಳ ನೋಂದಣಿ ನವೀಕರಣ ಪ್ರಕ್ರಿಯೆ ನಿಯಮವನ್ನು ಮುಂದಿನ 2022ರ ಏಪ್ರಿಲ್ ತಿಂಗಳಿನಲ್ಲಿ ಜಾರಿಗೆ ತರುವುದು ಅಧಿಕೃತವಾಗಿದ್ದು, ಹೊಸ ನಿಯಮದ ಪ್ರಕಾರ 15 ವರ್ಷಗಳಿಂತಲೂ ಹೆಚ್ಚು ಹಳೆಯ ವಾಹನಗಳು ನೋಂದಣಿ ನವೀಕರಣಕ್ಕಾಗಿ ಸದ್ಯ ಚಾಲ್ತಿಯಲ್ಲಿರುವ ಮರು ನೋಂದಣಿ ಶುಲ್ಕಕ್ಕಿಂತಲೂ ಎಂಟು ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ.
ಹಾಗೆಯೇ ಹಳೆಯ ದ್ವಿಚಕ್ರಗಳ ನೋಂದಣಿ ನವೀಕರಣಕ್ಕೆ ಚಾಲ್ತಿಯಲ್ಲಿರುವ ರೂ. 300 ರೂಪಾಯಿ ದರವನ್ನು ಹೊಸದಾಗಿ ರೂ. 1 ಸಾವಿರಕ್ಕೆ ಏರಿಕೆ ಮಾಡಲಾಗುತ್ತಿದ್ದು, ಖಾಸಗಿ ವಾಹನಗಳ ಮಾಲೀಕರು ತಮ್ಮ ನೋಂದಣಿ ಸರಿಯಾದ ಸಮಯಕ್ಕೆ ನವೀಕರಿಸದಿದ್ದರೆ ತಿಂಗಳಿಗೆ ರೂ. 300 ಮತ್ತು ಅದೇ ಸಮಯದಲ್ಲಿ ವಾಣಿಜ್ಯ ವಾಹನಗಳ ಮಾಲೀಕರು ನೋಂದಣಿಯನ್ನು ನವೀಕರಿಸಲು ವಿಳಂಬ ಮಾಡಿದರೆ ತಿಂಗಳಿಗೆ ರೂ .500 ದಂಡವನ್ನು ಪಾವತಿಸಬೇಕಾಗುತ್ತದೆ.
ನೋಂದಣಿ ನವೀಕರಣ ಶುಲ್ಕವನ್ನು ಹೆಚ್ಚಿಸಿದರೆ ಜನರು ಹಳೆಯ ವಾಹನಗಳನ್ನು ಬಳಸಲು ಹಿಂಜರಿಯುತ್ತಾರೆ ಎನ್ನುವ ಉದ್ದೇಶದಿಂದ ಇಂತಹ ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು 15 ವರ್ಷ ಮೇಲ್ಪಟ್ಟ ಪ್ರಯಾಣಿಕರ ಕಾರುಗಳನ್ನು ಮತ್ತು 8 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳ ಫಿಟ್ನೆಸ್ ಪರೀಕ್ಷೆಗೆ ಕಠಿಣವಾದ ಮಾನದಂಡಗಳನ್ನು ವಿಧಿಸಲು ನಿರ್ಧರಿಸಿದೆ.