ಬೆಂಗಳೂರು ಜ 5 : ರಾಜ್ಯದಲ್ಲಿ ದಿಢೀರ್ ಕೊರೊನಾ ಅಲೆ ಹೆಚ್ಚಾಗಿದ್ದು, ಕಳೆದ ಕೆಲವು ತಿಂಗಳಿನಿಂದ ಶೇ 1 ರಷ್ಟು ಇದ್ದ ಸೋಂಕು ಕೆಲವು ದಿನಗಳಿಂದ ಶೇ 2.59ಕ್ಕೆ ಏರಿಕೆಯಾಗಿದೆ. ಇದು ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಬಂದಿದೆ ಎಂಬುದನ್ನು ಖಚಿತಪಡಿಸುತ್ತದೆ. ನಾವೀಗ ಮೂರನೇ ಅಲೆಯ ಆರಂಭದಲ್ಲಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ನಾವೀಗ ಮೂರನೇ ಅಲೆಯ ಆರಂಭದಲ್ಲಿದ್ದೇವೆ. ದಿನದಿಂದ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮೊದಲು ಜ.15ರ ನಂತರ ಮೂರನೇ ಅಲೆ ಬರಬಹುದು ಎಂದು ತಜ್ಞರು ಹೇಳಿದ್ದರು. ಆದರೆ. ಈಗಾಗಲೇ ಮೂರನೇ ಅಲೆ ಆರಂಭವಾಗಿದೆ ಎಂದು ಹೇಳಿದ್ದಾರೆ
ಓಮಿಕ್ರಾನ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಸೋಮವಾರ ಒಂದೇ ದಿನ 1,290 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರು ನಗರದ ಒಂದರಲ್ಲಿಯೇ ಅತೀ ಹೆಚ್ಚು ಸೋಂಕಿತರಿದ್ದಾರೆ. ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಬೆಂಗಳೂರು ವಿಮಾನ ನಿಲ್ದಾಣ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಇನ್ನಷ್ಟು ನಿಗಾವಹಿಸುವ ಅಗತ್ಯವಿದೆ. ಉದಕ್ಕಾಗಿ ಮೈಕ್ರೋ ಕಂಟೈನ್ಮೆಂಟ್ ವಲಯಗಳನ್ನು ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಸೋಂಕು ಹೆಚ್ಚಳವಾಗಿದ್ದು, ಜನ ಹೆಚ್ಚು ಜಾಗೃತೆವಹಿಸಬೇಕಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಈಗಾಗಲೇ ರೆಡ್ ಝೋನ್ ನಲ್ಲಿದ್ದು, ಪ್ರತ್ಯೇಕವಾದ ಕಠಿಣ ನಿಯಮ ಅನಿರ್ವಾಯ, ಜನ ಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು. ಕೊರೋನಾ ಬರುವದನ್ನ ತಡೆಯಲು ಆಗುವುದಿಲ್ಲ. ಆದರೆ, ಸೋಂಕಿತರ ಸಂಖ್ಯೆ ಹೆಚ್ಚಾಗುವ ವೇಗವನ್ನು ತಗ್ಗಿಸಲು ಸಾಧ್ಯವಿದೆ. ಈ ಬಗ್ಗೆ ತಜ್ಞರೊಂದಿಗೆ ಸಭೆ ನಡೆಸಿ ಮಾರ್ಗೋಪಾಯ ರೂಪಿಸಲಾಗುವುದು ಎಂದಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಕೋವಿಡ್ ಸೋಂಕು ನಾಗಾಲೋಟ ಆರಂಭಿಸಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಸೋಂಕು ಬಹುತೇಕ ಡಬಲ್ ಆಗಿದೆ. ಸೋಮವಾರ 1,290 ಪ್ರಕರಣ ವರದಿಯಾಗಿದ್ದರೆ, ಮಂಗಳವಾರ ಅದು 2,479ಕ್ಕೆ ತಲುಪಿದೆ. ಇದರೊಂದಿಗೆ ಪಾಸಿಟಿವಿಟಿ ದರ ಕೂಡ ಆತಂಕ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶೇ.2.59ಕ್ಕೆ ನೆಗೆದಿದೆ.
ನಿನ್ನೆ ದಾಖಲಾದ ಪ್ರಕರಣಗಳು ಕಳೆದ ಆರು ತಿಂಗಳುಗಳಲ್ಲೇ ಅಧಿಕವಾಗಿದೆ. ಇದು ಸ್ಪಷ್ಟವಾಗಿ ಕೋವಿಡ್ ಮೂರನೇ ಅಲೆಗೆ ಬಿರುಸಾಗಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ 15-20 ಸಾವಿರ ಕಡಿಮೆ ಪರೀಕ್ಷೆ ನಡೆದಿದ್ದರೂ 2,479 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ