ಬೆಂಗಳೂರು ಡಿ 2 : ಒಮಿಕ್ರಾನ್ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಇಬ್ಬರಿಗೆ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಒಮಿಕ್ರಾನ್ ತಳಿಯ ಕೊರೊನಾ ಪತ್ತೆಯಾಗಿದ್ದು, ಅದು ಕರ್ನಾಟಕದಲ್ಲೇ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. 66 ವರ್ಷದ ವೃದ್ಧ, 46 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕರ್ನಾಟಕದ ಮೂಲಕವೇ ಭಾರತಕ್ಕೆ ಒಮಿಕ್ರಾನ್ ಎಂಟ್ರಿ ಕೊಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದ ಇಬ್ಬರಿಗೆ ಒಮಿಕ್ರಾನ್ ವೈರಸ್ ದೃಢವಾಗಿದ್ದು, ಈ ಪೈಕಿ ಬೆಂಗಳೂರಿನ ಒಬ್ಬರಿಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಓರ್ವ ಸೋಂಕಿತ ವಾಪಸ್ ವಿದೇಶಕ್ಕೆ ಹೋಗಿರುವ ಮಾಹಿತಿ ಇದೆ. ಕೇಸ್ ಪತ್ತೆಯಾಗಿರುವ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ವಹಿಸಿ. ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಿಂದ ದೂರವಿರಿ ಅಂತ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.