ನಮ್ಮ ಅಡುಗೆ ಮನೆಯಲ್ಲಿರುವ ವಸ್ತುಗಳಿಂದಲೇ ನಾವು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಇನ್ನು ಚಳಿಗಾಲದಲ್ಲಿ ಚರ್ಮ ಒಡೆಯುವುದು, ತುಟಿಗಳು ಒಡೆಯುವುದು ಸರ್ವೇ ಸಾಮಾನ್ಯ. ಆದರೆ ಈ ಸಮಸ್ಯೆ ನಿವಾರಣೆಗೆ ನಮ್ಮ ಮನೆಯ ಅಡುಗೆ ಮನೆಯಲ್ಲೇ ನೈಸರ್ಗಿಕ ಪರಿಹಾರವಿದೆ, ಆದರೆ ನಾವು ಅಂಗಡಿಗಳಲ್ಲಿ ಸಿಗುವ ಕೆಮಿಕಲ್‌ಯುಕ್ತ ಕ್ರೀಮ್‌ಗಳನ್ನು ಹಚ್ಚಿಕೊಳ್ಳುತ್ತೇವೆ.
ತುಟಿಗಳ ಅಂದವನ್ನು ಹೆಚ್ಚಿಸುವ ಅನೇಕ ವಸ್ತುಗಳು ನಮ್ಮ ಅಡುಗೆ ಮನೆಯಲ್ಲಿಯೇ ಇವೆ. ಅವುಗಳಿಂದ ತಯಾರಿಸಿದ ಮನೆಮದ್ದನಿಂದ ತುಟಿಗಳ ಸಂರಕ್ಷಣೆ ಮಾಡುವುದರ ಜತೆಗೆ ಅಂದವನ್ನು ಹೆಚ್ಚಿಸುತ್ತದೆ.
ನಿತ್ಯ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ತುಟಿಗೆ ಮಸಾಜ್ ರೂಪದಲ್ಲಿ ಹಚ್ಚಿಕೊಂಡರೆ ತುಟಿ ಮೃದುವಾಗಿ ಹೊಳಪು ಪಡೆದುಕೊಳ್ಳುತ್ತದೆ. ಬೆಣ್ಣೆ ಅಥವಾ ತುಪ್ಪವನ್ನು ಹಚ್ಚುವುದರಿಂದ ತುಟಿ ಗುಲಾಬಿ ಬಣ್ಣಕ್ಕೂ ತಿರುಗುತ್ತದೆ. ಬೆಣ್ಣೆಯನ್ನು ತುಟಿಗೆ ಮಾತ್ರವಲ್ಲದೆ ಹಿಮ್ಮಡಿ ಕಾಲಿನ ಒಡಕಿಗೂ ಔಷಧವಾಗಿ ಬಳಸಬಹುದು.
ಹೆಚ್ಚು ಮಸಾಲೆಯುಕ್ತ ವಸ್ತುಗಳನ್ನು ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚಿ ತುಟಿಯ ಸಿಪ್ಪೆ ಏಳಬಹುದು. ಹಾಗಾಗಿ ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ತಪ್ಪದೆ ಕುಡಿಯಿರಿ. ಇದರಿಂದ ತುಟಿ ಒಣಗುವ ಹಾಗೂ ಒಡೆಯುವ ಸಮಸ್ಯೆ ದೂರವಾಗುತ್ತದೆ.