ಲಂಡನ್, ಮಾ. 10: ‘ವಿಶ್ವದಲ್ಲೇ ಅತ್ಯಂತ ದುಬಾರಿ ಔಷಧ’ಕ್ಕೆ ಇಂಗ್ಲೆಂಡ್ನ ನ್ಯಾಷನಲ್ ಹೆಲ್ತ್ ಸರ್ವೀಸ್ ಅನುಮತಿ ನೀಡಿದೆ. ತುಂಬಾ ಅಪರೂಪದ ಜೈವಿಕ ಅಸ್ವಾಸ್ಥ್ಯದಿಂದ ಬಳಲುತ್ತಿರುವ ಹಸುಗೂಸುಗಳು ಹಾಗೂ ಮಕ್ಕಳ ಬದುಕನ್ನು ಬದಲಿಸುವ ನಡೆ ಇದಾಗಲಿದೆ. ಆನುವಂಶಿಕವಾಗಿ ಬರುವ ಸಮಸ್ಯೆಗೆ ಕಂಡುಹಿಡಿದಿರುವ ಈ ಹೊಸ ಚಿಕಿತ್ಸೆಗೆ ‘Zolgensma’ (ಝೋಲ್ಗೆಸ್ಮಾ) ಎಂದು ಹೆಸರಿಡಲಾಗಿದೆ. ಅಂದಹಾಗೆ ಈ ಚಿಕಿತ್ಸೆಯ ವೆಚ್ಚ ಎಷ್ಟು ಗೊತ್ತಾ? ಸುಮಾರು ೧೬ಕೋ.ರೂ. ಹೌದು ಈ ಔಷಧಿಯ ಒಂದು ಡೋಸ್ಗೆ 24.8 ಲಕ್ಷ ಅಮೆರಿಕನ್ ಡಾಲರ್ ಆಗಬಹುದು ಎಂದು ಎನ್ಎಚ್ಎಸ್ ಇಂಗ್ಲೆಂಡ್ ಹೇಳಿದೆ.
ಸ್ಪೈನಲ್ ಮಸ್ಕ್ಯುಲಾರ್ ಅಟ್ರೋಫಿಯಿಂದ ಬಳಲುತ್ತಿರುವ ಹಸುಗೂಸುಗಳು ಹಾಗೂ ಬಾಲಕ- ಬಾಲಕಿಯರಿಗೆ ಈ ಔಷಧ ಬಳಕೆ ಆಗುತ್ತದೆ. ಇದೊಂದು ಅಪರೂಪವಾಗಿ ಬರುವ ಆನುವಂಶಿಕ ಕಾಯಿಲೆಯಾಗಿದ್ದು, ಇದರಿಂದ ಪಾರ್ಶ್ವವಾಯು, ಮಾಂಸಖಂಡಗಳ ದೌರ್ಬಲ್ಯ ಹಾಗೂ ಚಲನೆಯೇ ಕಷ್ಟವಾಗುತ್ತದೆ. ಟೈಪ್1 ಎಸ್ಎಂಎ ಸಮಸ್ಯೆಯೊಂದಿಗೆ ಹುಟ್ಟುವ ಮಕ್ಕಳು ತುಂಬ ಸಾಮಾನ್ಯವಾಗಿ ಕಂಡುಬರುತ್ತಾರೆ, ಆದರೆ ಹೆಚ್ಚೆಂದರೆ ಎರಡು ವರ್ಷಗಳ ಕಾಲ ಬದುಕುತ್ತಾರೆ.
ಬ್ರಿಟನ್ ಹೆಲ್ತ್ ಸರ್ವೀಸ್ನಲ್ಲಿ ಔಷಧ ದೊರೆಯಲಿದ್ದು, ಹೆರಿಗೆ ಸಂದರ್ಭದಲ್ಲಿ ವೈದ್ಯಕೀಯ ನಿಗಾ ಉಚಿತವಾಗಿ ಮಾಡುತ್ತಾರೆ. ತೆರಿಗೆಪಾವತಿದಾರರ ಹಣದಿಂದ ಈ ಐತಿಹಾಸಿಕ ರಹಸ್ಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಇಂಗ್ಲೆಂಡ್ನ ಎನ್ಎಚ್ಎಸ್ ಮುಖ್ಯಾಧಿಕಾರಿ ಸೈಮನ್ ಸ್ಟೀವನ್ಸ್ ಘೋಷಣೆ ಮಾಡಿದ್ದಾರೆ. ಸಾಮಾನ್ಯ ತೆರಿಗೆ ಹಣದ ಮೂಲಕ ಸರ್ಕಾರವು ಎನ್ಎಚ್ಎಸ್ಗೆ ಔಷಧಿಯನ್ನು ಒದಗಿಸುತ್ತದೆ.
ಝೋಲ್ಗೆಸ್ಮಾ ಉತ್ಪಾದಿಸಿರುವುದು ನೊವಾರ್ಟೀಸ್ ಜೀನ್ ಥೆರಪೀಸ್ (ಇದು ಯು.ಎಸ್. ಫಾರ್ಮಾಸ್ಯುಟಿಕಲ್ ನೊವಾರ್ಟೀಸ್ ಭಾಗ). ಅಧ್ಯಯನದಲ್ಲಿ ಗೊತ್ತಾಗಿರುವುದೇನೆಂದರೆ, ಒಮ್ಮೆ ಚಿಕಿತ್ಸೆ ಆರಂಭಿಸಿದ ತಕ್ಷಣ ಯಾವುದರ ಸಹಾಯ ಇಲ್ಲದೆ ಮಕ್ಕಳಿಗೆ ಉಸಿರಾಡಲು, ಸ್ವತಂತ್ರವಾಗಿ ಎದ್ದುಕೂರಲು, ತೆವಳಲು ಮತ್ತು ನಡೆಯಲು ಈ ಔಷಧದಿಂದ ಸಾಧ್ಯವಾಗುತ್ತದೆ. ದೊರೆತ ಮಾಹಿತಿ ಪ್ರಕಾರ, ಟೈಪ್ 1 ಎಸ್ಎಂಎ ಇರುವ ಮಕ್ಕಳಲ್ಲಿ ಝೋಲ್ಗೆಸ್ಮಾದಿಂದ ವೇಗವಾದ ಹಾಗೂ ಸ್ಥಿರವಾದ ಚೇತರಿಕೆ ಕಾಣುತ್ತದೆ. ಜೀವತಾವಧಿ ಜಾಸ್ತಿ ಆಗುತ್ತದೆ. 80ರಷ್ಟು ಮಕ್ಕಳು ಒಂದು ವರ್ಷದಲ್ಲಿ ಈ ಥೆರಪಿಯಿಂದ ಅನುಕೂಲ ಪಡೆಯುತ್ತವೆ ಎಂದು ಎನ್ಎಚ್ಎಸ್ ಹೇಳಿದೆ.