ಬೆಂಗಳೂರು, ಜು. 24: ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಜು.25ರಿಂದ ಪೂಜಾದಿ ಸೇವೆ ಹಾಗೂ ಪ್ರಸಾದ ವಿನಿಯೋಗವನ್ನು ಪುನರಾರಂಭಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಈ ಹಿಂದೆ ದೇವಸ್ಥಾನಗಳಲ್ಲಿ ಕೇವಲ ದೇವರ ದರ್ಶನಕ್ಕೆ ಮಾತ್ರವೇ ಭಕ್ತರಿಗೆ ಅವಕಾಶ ನೀಡಿದ್ದರ ಪರಿಣಾಮ ಇತರೆ ಸೇವೆಗಳು, ಪ್ರಸಾದ ವಿನಿಯೋಗಕ್ಕೆ ಅವಕಾಶ ಇರಲಿಲ್ಲ. ಆದರೆ ಇದೀಗ ಈ ಆದೇಶವನ್ನು ಹಿಂಪಡೆದಿರುವ ಸರ್ಕಾರ, ಜು.25ರಿಂದ ಪ್ರಸಾದ, ಸೇವೆಗಳನ್ನು ಆರಂಭಿಸಲು ಸಮ್ಮತಿ ನೀಡಿದೆ.
ಈ ಕುರಿತು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದು, ಈ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ 25ರಿಂದ ರಾಜ್ಯದಾದ್ಯಂತ ದೇವಾಲಯಗಳಲ್ಲಿ ಪೂಜಾದಿ ಸೇವೆ ಮತ್ತು ಪ್ರಸಾದ ವಿತರಣೆಗೆ ಅವಕಾಶ ನೀಡಲಾಗುತ್ತದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.