ಬೆಂಗಳೂರು, ಫೆ. 08: ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದವರು, ಸೋತವರು, ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲರೂ ನಮ್ಮ ಹುಡುಗರೇ. ಎಲ್ಲರೂ ಮುಂದಿನ ದಿನಗಳಲ್ಲಿ ಪಕ್ಷಕ್ಕಾಗಿ ದುಡಿಯಲಿದ್ದು, ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆದು, ಬಿಜೆಪಿ ಮುಕ್ತ ಕರ್ನಾಟಕ ಮಾಡುವುದೇ ಅವರ ಗುರಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಆಂತರಿಕವಾಗಿ ಚುನಾವಣೆ ನಡೆದಿದೆ. ಅದರ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ ಗೆಲುವು, ಸೋಲು ನನಗೆ ಮುಖ್ಯ ಅಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ತಮ್ಮ ಹೋರಾಟದ ಛಲ ತೋರಿರುವುದು ಬಹಳ ಮುಖ್ಯ. ಗೆದ್ದವರು ಹಾಗೂ ಸೋತವರನ್ನು ಸಮಾನಾಗಿ ತೆಗೆದುಕೊಂಡು ಹೋಗುವ ಕೆಲಸ ನಾನು ಮಾಡುತ್ತೇನೆ. ರಾಜಕೀಯದಲ್ಲಿ ಅಧಿಕಾರ ಹಂಚಿಕೆ ಹಾಗೂ ಕಾಳಜಿ ಮುಖ್ಯ. ನಾವು ಎಲ್ಲರ ಶಕ್ತಿಯನ್ನು ಬಳಕೆ ಮಾಡಿಕೊಳ್ಳಬೇಕು. ಅದನ್ನು ಮಾಡುತ್ತೇವೆ.
ಈ ಫಲಿತಾಂಶದಿಂದ ಯಾವ ಗೊಂದಲವೂ ಸೃಷ್ಟಿ ಆಗಿಲ್ಲ. ಕೇಸಿನ ವಿಚಾರವಾಗಿ ಕೆಲವು ನಿರ್ಧಾರ ತೆಗೆದುಕೊಂಡಿದ್ದಾರೆ. ನನ್ನ ಮೇಲೂ ಬಿಜೆಪಿ ಸ್ನೇಹಿತರು ಕೇಸು ಹಾಕಿಸಿದ್ದಾರೆ. ಹೈಕಮಾಂಡ್ ಯಾರನ್ನು ನೇಮಕ ಮಾಡುತ್ತದೆಯೋ ಅವರ ಜತೆಗೂ ಕೆಲಸ ಮಾಡುತ್ತೇನೆ. ಯಾರು ನೇಮಕ ಆಗುವುದಿಲ್ಲವೋ ಅವರನ್ನೂ ಸೇರಿಸಿಕೊಂಡು ಕೆಲಸ ಮಾಡುತ್ತೇನೆ. ಅವರಲ್ಲೂ ನಾಯಕತ್ವ ಗುಣಗಳಿವೆ. ನಾನು ವಿದ್ಯಾರ್ಥಿ ಚುನಾವಣೆಯಲ್ಲಿ ಮೊದಲು ಸೋತಿದ್ದೆ. ನಂತರ ಗೆದ್ದೆ.
ಕುರುಬ ಹಾಗೂ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ವಿಚಾರದಲ್ಲಿ ಸರ್ಕಾರ ಮಾತನಾಡಬೇಕು. ನಾನು ಆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ಇಂತಹ ವಿಚಾರಗಳ ಬಗ್ಗೆ ಮಾತನಾಡುವ ಮುನ್ನ ಪಕ್ಷದ ಒಳಗೆ ಚರ್ಚೆ ಮಾಡಬೇಕು. ಪಕ್ಷದ ಅಭಿಪ್ರಾಯ ತೆಗೆದುಕೊಳ್ಳಬೇಕು. ಇದು ಸಾರ್ವಜನಿಕವಾಗಿ ಚರ್ಚಿಸುವ ವಿಚಾರ ಅಲ್ಲ.
ಈ ವಿಚಾರದಲ್ಲಿ ನನಗೆ ಆಘಾತ ಎನಿಸಿದ್ದು, ಸಚಿವರೇ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅವರ ಬಳಿಯೇ ಅಧಿಕಾರ ಇದೆ. ಅವರ ಕೈಯಲ್ಲಿ ಪೆನ್ನು, ಪೇಪರ್ ಇದೆ. ಆದರೂ ಅವರು ಬೀದಿಗೆ ಯಾಕೆ ಇಳಿದಿದ್ದಾರೋ ಗೊತ್ತಾಗುತ್ತಿಲ್ಲ.
ಸ್ವಾಮೀಜಿಗಳು ಹೋರಾಟ ಮಾಡುವುದರಲ್ಲಿ ಒಂದು ಅರ್ಥ ಇದೆ. ಅವರಿಗೆ ಧ್ಯೇಯ, ಉದ್ದೇಶ ಇರುತ್ತದೆ. ಆದರೆ ಮಂತ್ರಿಗಳು ಹೋರಾಟ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ.
ವಿಧಾನ ಪರಿಷತ್ತಿನ ಸಭಾಪತಿ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ನಜೀರ್ ಅಹ್ಮದ್ ಅವರನ್ನು ಕಣಕ್ಕಿಳಿಸುತ್ತೇವೆ. ಯಾವ ಯಾವ ಪಕ್ಷದವರು ಏನು ನಿರ್ಧಾರ ಕೈಗೊಳ್ಳುತ್ತಾರೆ ಅಂತ ಕಾದು ನೋಡೋಣ.