ವಾಷಿಂಗ್ಟನ್, ಏ. 26: ಆಕ್ಸಿಜನ್ ಅಭಾವವನ್ನು ಎದುರಿಸುತ್ತರುವ ಭಾರತದ ಸಹಾಯಕ್ಕೆ ಅಮೆರಿಕ ನಿಂತಿದೆ. 5 ಟನ್ಗಳಷ್ಟು ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ನ್ಯೂಯಾರ್ಕ್ನಿಂದ ಭಾರತಕ್ಕೆ ಕಳಿಸಲಾಗಿದೆ. ಹಾಗೇ, ಭಾರತಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಮಾಡಲೂ ಅಮೆರಿಕ ಸಿದ್ಧವಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಈ ಹಿಂದೆ ಮೊದಲನೇ ಅಲೆಯಲ್ಲಿ ಕೊವಿಡ್ ಸೋಂಕಿನಿಂದ ಕಂಗೆಟ್ಟಿದ್ದ ಅಮೆರಿಕಕ್ಕೆ ಭಾರತ ಸಹಾಯ ಮಾಡಿದೆ. ಈಗ ಭಾರತಕ್ಕೆ ಅಗತ್ಯವಿರುವ ನೆರವನ್ನು ನಾವು ನೀಡುತ್ತೇವೆ ಎಂದು ಜೋ ಬೈಡನ್ ಟ್ವೀಟ್ ಮಾಡಿದ್ದಾರೆ.
ಏರ್ ಇಂಡಿಯಾದ ಎ 102 ವಿಮಾನವು 5000 ಕೆಜಿ ಆಕ್ಸಿಜನ್ ಸಾಂದ್ರಕಗಳನ್ನು ನ್ಯೂಯಾರ್ಕ್ ಜಾನ್ ಎಫ್ ಕೆನಡಿ ವಿಮಾನನಿಲ್ದಾಣದಿಂದ ನವದೆಹಲಿಗೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ತರಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಹಾಗೇ, ನಾಳೆ (ಏಪ್ರಿಲ್ 27)ರಂದು ಇನ್ನೊಂದು ವಿಮಾನ ಆಮ್ಲಜನಕವನ್ನು ಹೊತ್ತು ಭಾರತಕ್ಕೆ ಬರಲಿದೆ. ಕಳೆದ ವರ್ಷ ಅಲ್ಲಿನ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಮನವಿ ಮೇರೆಗೆ 50 ಮಿಲಿಯನ್ಗಳಷ್ಟು ಹೈಡ್ರಾಕ್ಸಿಕ್ಲೊರೋಕ್ವಿನ್ನ್ನು ಅಮೆರಿಕಕ್ಕೆ ಕಳಿಸಿತ್ತು. ಇದೀಗ ಆ ಸಹಾಯವನ್ನು ನೆನಪಿಸಿಕೊಂಡಿರುವ ಜೋ ಬೈಡನ್ ತಾವು ಈಗ ಭಾರತಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಅಮೆರಿಕ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಕೂಡ ಭಾರತದೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡಿದ್ದಾರೆ. ಭಾರತಕ್ಕೆ ಅಗತ್ಯ ಇರುವ ಸಹಾಯ ನೀಡುವ ಜತೆ, ಅಲ್ಲಿನ ಜನರು, ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇವೆ ಎಂದೂ ಟ್ವೀಟ್ ಮಾಡಿದ್ದಾರೆ