ಕನ್ನಡದ ಪ್ರಸಿದ್ಧ ಲೇಖಕ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥಾ ಸಂಕಲನ
‘ನಮ್ಮ ಊರಿನ ರಸಿಕರು’ ವೆಬ್ ಸರಣಿಯಾಗಿ 8 ಕಂತುಗಳಲ್ಲಿ ಪ್ರಸಾರವಾಗಲಿದೆ. ಕರ್ನಾಟಕದ ಎಲ್ಲಾ ಪ್ರಾಂತ್ಯದ, ಉಪ ಭಾಷೆಗಳಿಂದ ಕೂಡಿದ ಕಾರ್ಯಕ್ರಮ ‘ಕಟ್ಟೆ’ ಒಟಿಟಿಯ ಮೂಲಕ ಇದು ರಾಜ್ಯೋತ್ಸವದಂದು ಪ್ರಸಾರವಾಗಲಿದೆ.
ಕನ್ನಡದ ಅಮರ ಕಲಾವಿದರಾದ ದಿ.ನರಸಿಂಹರಾಜು ಅವರ ಮೊಮ್ಮಕಳಾದ ಅರವಿಂದ್ ಹಾಗೂ ಅವಿನಾಶ್ ಚಿತ್ರರಂಗದಲ್ಲಿ ಚಿರಪರಿಚಿತರು. ಈಗ ಇವರು ಕೆಲವು ಸ್ನೇಹಿತರೊಂದಿಗೆ ಸೇರಿ ಕಟ್ಟೆ ಎಂಬ ಹೆಸರಿನ ಕನ್ನಡ ಒಟಿಟಿ ಆರಂಭಿಸುತ್ತಿದ್ದು ಅದಕ್ಕೆ ಕನ್ನಡ ರಾಜ್ಯೋತ್ಸವದಂದು ಚಾಲನೆ ನೀಡಿ ಈ ವೆಬ್ ಸೀರೀಸ್ ಪ್ರಸಾರ ಮಾಡಲಿದ್ದಾರೆ. ಕ್ಯಾರಂಬೋಲ, ಮ್ಯಾಂಗೋ ಹೌಸ್ ಮತ್ತು ಕಟ್ಟೆ ಈ ವೆಬ್ ಸರಣಿಯನ್ನು ನಿರ್ಮಿಸಿದೆ. ನಂದಿತಾ ಯಾದವ್ ಅವರು ಇದರ ನಿರ್ದೇಶಕಿ.
‘ನಮ್ಮ ಊರಿನ ರಸಿಕರು’ ಸರಣಿಯ ಮುಖ್ಯ ಭೂಮಿಕೆಯಲ್ಲಿ ರಾಜೇಶ್ ನಟರಂಗ, ಲಕ್ಷ್ಮೀ ಗೋಪಾಲಸ್ವಾಮಿ, ಪಿ ಶೇಷಾದ್ರಿ, ಮಂಡ್ಯ ರಮೇಶ್, ಬಿ ಸುರೇಶ, ರಮೇಶ್ ಪಂಡಿತ್, ಸುನೇತ್ರ ಪಂಡಿತ್, ಸುಂದರ್, ಶಶಿ ಕುಮಾರ್, ರವಿ ಕುಮಾರ್, ಮಂಗಳ ಎನ್, ಶೃಂಗಾ ಬಿವಿ, ಸುಜಯ್ ಶಾಸ್ತ್ರೀ, ಅಂಜನ್ ಮತ್ತಿತರರು ನಟಿಸಿದ್ದಾರೆ.
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಂಬಂಧಿ ಜನರಲ್ ರಘುನಾಥ್ ಈ ಕಥಾಸಂಕಲನದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ಕೃತಿ ಐವತ್ತು ಸಾವಿರಕ್ಕೂ ಅಧಿಕ ಮುದ್ರಣ ಕಂಡಿದೆ. ಈಗ ವೆಬ್ ಸರಣಿ ಮುಖಾಂತರ ಬರತ್ತಿರುವುದು ಖುಷಿ ಎಂದರು ಇಂಡಿಯನ್ ಬುಕ್ ಹೌಸ್ ನ ಅಡಿಗರು. ನಾನು ಈ ವೆಬ್ ಸರಣಿ ಮಾಡಲು ಸಹಕಾರ ನೀಡಿದ ಕ್ಯಾರಂಬೋಲ, ಮ್ಯಾಂಗೋ ಹೌಸ್ ಅವರಿಗೆ ಮೊದಲು ಧನ್ಯವಾದ . ಇಲ್ಲಿ ಉಪಸ್ಥಿತರಿರುವ ಕಲಾವಿದರ ತಂಡದೊಂದಿಗೆ ನನಗೆ ಇಪ್ಪತ್ತೈದು ವರ್ಷಗಳ ಸ್ನೇಹವಿದೆ. ಅದರಿಂದ ಚಿತ್ರೀಕರಣ ಸರಾಗವಾಗಿ ಮುಗಿಯಿತು. ಒಂದು ಚೂರು ತೊಂದರೆಯಾಗಿಲ್ಲ. ತಾಂತ್ರಿಕವರ್ಗದವರ ಸಹಕಾರವಂತೂ ಮರೆಯುವ ಹಾಗಿಲ್ಲ. ನಮ್ಮ ವೆಬ್ ಸರಣಿ ಹೊರ ತರುತ್ತಿರುವ ಕಟ್ಟೆ ಓಟಿಟಿ ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ದೇಶಕಿ ನಂದಿತಾ ಯಾದವ್. ನಂದಿತಾ ಯಾದವ್ ಅವರ ‘ರಾಜು’ ಚಿತ್ರಕ್ಕೆ ರಾಜ್ಯಪ್ರಶಸ್ತಿ ಬಂದಿದೆ. ಕನ್ನಡ ಹಾಗೂ ಮರಾಠಿಯಲ್ಲಿ ಅವರು ನಿರ್ದೇಶಿಸಿರುವ ‘ರಾಜಸ್ಥಾನ್ ಡೈರೀಸ್’ ಬಿಡುಗಡೆ ಹಂತದಲ್ಲಿದೆ.
ಈ ಸರಣಿಯಲ್ಲಿ ಅಭಿನಯಿಸಿರುವ ರಾಜೇಶ್ ನಟರಂಗ, ಲಕ್ಷ್ಮೀ ಗೋಪಾಲಸ್ವಾಮಿ, ಪಿ ಶೇಷಾದ್ರಿ, ಬಿ ಸುರೇಶ, ರಮೇಶ್ ಪಂಡಿತ್, ಸುನೇತ್ರ ಪಂಡಿತ್, ಸುಂದರ್, ಶಶಿ ಕುಮಾರ್, ರವಿ ಕುಮಾರ್, ಮಂಗಳ ಎನ್, ಶೃಂಗಾ ಬಿವಿ ಹಾಗೂ ಅಂಜನ್ ಭಾರದ್ವಾಜ್ ಕಥಾ ಸಂಕಲನದ ಬಗ್ಗೆ ಹಾಗೂ ಚಿತ್ರೀಕರಣದ ಅನುಭವಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡರು. ಛಾಯಾಗ್ರಾಹಕ ಅಶೋಕ್ ಕಶ್ಯಪ್ , ಸಂಗೀತ ನಿರ್ದೇಶಕ ಪ್ರಕಾಶ್ ಸೊಂಟಕ್ಕೆ ಹಾಗೂ ಮೇಕಪ್ ಕುಮಾರ್ ಅವರು ತಮ್ಮ ಕಾರ್ಯಗಳ ಬಗ್ಗೆ ಮಾತನಾಡಿದರು. ಸುನೇತ್ರಾ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.