Karwar: ಹಾಡುಹಕ್ಕಿ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ (Sukri Bommagowda) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಸುಕ್ರಜ್ಜಿ ಇಂದು ಮುಂಜಾನೆ 3.30ಕ್ಕೆ ಕೊನೆಯುಸಿರೆಳೆದಿದ್ದಾರೆ.ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು, ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ (Geriatric illness) ಒಳಗಾಗಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೇರಿ (Badigeri) ಗ್ರಾಮದ ನಿವಾಸಿ ಆಗಿದ್ದರು. ಹಾಲಕ್ಕಿ ಒಕ್ಕಲಿಗ ಬುಡಕಟ್ಟು (Halakki Okkaliga tribe) ಜನಾಂಗದಲ್ಲಿ ಜನಿಸಿದ್ದ ಸುಕ್ರಿ ಬೊಮ್ಮ ಗೌಡ (Sukri Bommagowda) ಅವರನ್ನು ಜಾನಪದ ಕೋಗಿಲೆ ಅಂತಲೂ ಕರೆಯಲಾಗುತ್ತಿತ್ತು.
ನಾಡೋಜ, ರಾಜ್ಯೋತ್ಸವ, ಜಾನಪದ ಶ್ರೀ ಪ್ರಶಸ್ತಿ ಪಡೆದಿದ್ದ ಸುಕ್ರಜ್ಜಿ 2017 ರಲ್ಲಿ ಪದ್ಮಶ್ರೀ ಪ್ರಶಸ್ತಿ (Padma Shri Award) ಪಡೆದಿದ್ದರು. ಜಾನಪದ ಹಾಡುಗಳ ಮೂಲಕ ಸಮುದಾಯದ ಮಹಿಳೆಯ ಪರಿಚಯಿಸುವ ಕಾರ್ಯ ನಿರ್ವಹಿಸಿದ್ದ ಸುಕ್ರಜ್ಜಿ ಉತ್ತರಕನ್ನಡ ಜಿಲ್ಲೆಗೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ (Multispeciality Hospital), ತಮ್ಮೂರನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿಸಲು ಹೋರಾಟಗಳ ಮೂಲಕ ಮುಂಚೂಣಿಯಲ್ಲಿ ಇರುತ್ತಿದ್ದರು.

ದುರ್ದೈವದ ಸಂಗತಿ ಅಂದರೆ ಉತ್ತರ ಕನ್ನಡ ಜಿಲ್ಲೆಗೆ (Uttara Kannada district) ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗಾಗಿ ಹೋರಾಟ ಮಾಡಿದ್ದರೂ ಕೂಡ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆಗಳಿಲ್ಲದೇ ಹಲವು ಬಾರಿ ಚಿಕಿತ್ಸೆಗಾಗಿ ದೂರದ ಮಂಗಳೂರು, ಮಣಿಪಾಲ್ಗೆ (Mangalore to Manipal) ತೆರಳಿ ಆಸ್ಪತ್ರೆಗೆ ದಾಖಲಾಗುವಂತಾಗಿತ್ತು. ಬಡಗೇರಿಯನ್ನು ಸಾರಾಯಿ ಮುಕ್ತ ಗ್ರಾಮ (Badageri is a brewery free village) ಮಾಡುವಲ್ಲಿ ಅವಿರತವಾಗಿ ಹೋರಾಡಿದ್ದ ಸುಕ್ರಜ್ಜಿ, ಯಾವುದೇ ಕಾರ್ಯಕ್ರಮಗಳಿಗೆ ಹೋದಾಗಲೂ ಸಾರಾಯಿ ತ್ಯಜಿಸುವಂತೆ ಕರೆ ನೀಡುತ್ತಿದ್ದರು. ಅಲ್ಲದೇ ಜಿಲ್ಲೆಯ ಅನೇಕ ಹೋರಾಟಗಳಲ್ಲಿ ಸುಕ್ರಜ್ಜಿ ಮುಂಚೂಣಿಯಲ್ಲಿ ಇದ್ದು, ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆ ಅಷ್ಟಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.ಸುಕ್ರಜ್ಜಿಯ ಅಗಲಿಕೆಯಿಂದ ಜಿಲ್ಲೆಯ ಜಾನಪದ ಲೋಕದ ಮೇರು ಕೊಂಡಿ ಕಳಚಿದಂತಾಗಿದೆ. ಸುಕ್ರಿ ಬೊಮ್ಮ ಗೌಡ (Sukri Bommagowda) ನಿಧನಕ್ಕೆ ಜಿಲ್ಲೆಯ ಅನೇಕ ಗಣ್ಯರು, ಸಾಹಿತಿಗಳು, ಜಾನಪದ ಕಲಾವಿದರು, ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ.