ಕರ್ನಾಟಕ ಹೈಕೋರ್ಟ್(Karnataka Highcourt) ನೀಡಿರುವ ತೀರ್ಪನ್ನು ಟೀಕಿಸಿರುವ ನೆರೆಯ ಪಾಕಿಸ್ತಾನ(Pakisthan) ‘ಕರ್ನಾಟಕ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು(Verdict), ಮುಸ್ಲಿಂ ವಿರೋಧಿ ಅಭಿಯಾನದ ಭಾಗವೆಂದು’ ಟೀಕಿಸಿದೆ. ನಿನ್ನೆ ಕರ್ನಾಟಕ ರಾಜ್ಯ ಹೈಕೋರ್ಟ್‍ನ ತ್ರಿಸದಸ್ಯರ ನೇತೃತ್ವದ ಸಾಂವಿಧಾನಿಕ ಪೀಠ ಹಿಜಾಬ್ ಕುರಿತು ತನ್ನ ಅಂತಿಮ ತೀರ್ಪನ್ನು ನೀಡಿತ್ತು. ‘ಹಿಜಾಬ್ ಇಸ್ಲಾಂನ ಅಗತ್ಯ ಧಾರ್ಮಿಕ ಭಾಗವಲ್ಲ, ಶಾಲೆಗಳಲ್ಲಿ ಹಿಜಾಬ್‍ಗೆ ನಿಷೇಧ ಹೇರುವುದು, ಮುಸ್ಲಿಂ ಹೆಣ್ಣು ಮಕ್ಕಳ ಧಾರ್ಮಿಕ ಸ್ವಾತಂತ್ರ್ಯದ ಹರಣವಾಗದು.

1400 ವರ್ಷಗಳ ಇತಿಹಾಸವಿರುವ ತ್ರಿವಳಿ ತಲಾಖ್ ಪದ್ದತಿಯನ್ನೇ ದೇಶದ ಸುಪ್ರೀಂಕೋರ್ಟ್ ನಿಷೇಧಿಸಿದೆ. ಹೀಗಾಗಿ ಸಮವಸ್ತ್ರ ಸಂಹಿಂತೆಯಂತೆ ಎಲ್ಲ ಧರ್ಮದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಉಡುಪನ್ನು ಧರಿಸಬಾರದು ಎಂದು ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು. ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ “ಭಾರತ ತನ್ನ ಜಾತ್ಯಾತೀತ ನಿಲುವನ್ನು ಕಳೆದುಕೊಳ್ಳುತ್ತಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ.
ಈ ತೀರ್ಪಿನ ಮೂಲಕ ಭಾರತದಲ್ಲಿ ಮುಸ್ಲಿಂಮರ ಧಾರ್ಮಿಕ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರ ನಡೆಯುತ್ತಿದೆ. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಭಾಗವಾಗಿದೆ. ಹೀಗಿರುವಾಗ ಅದನ್ನು ನಿಷೇಧಿಸುವ ಮೂಲಕ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನ್ ಆರೋಪಿಸಿದೆ. ಇನ್ನು ಪಾಕಿಸ್ತಾನ ನೀಡಿರುವ ಹೇಳಿಕೆಗೆ ಭಾರತ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲ ಭಾರತೀಯರು ಪಾಕಿಸ್ತಾನದ ಹೇಳಿಕೆಯನ್ನು ಖಂಡಿಸಿದ್ದಾರೆ. ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರಾಗಿದ್ದಾರೆ.

ಹೀಗಾಗಿಯೇ ಅವರ ಜನಸಂಖ್ಯೆಯೂ ಹೆಚ್ಚಾಗಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಸದೃಡವಾಗಿದ್ದು, ಎಲ್ಲರ ಧಾರ್ಮಿಕ ಹಕ್ಕುಗಳನ್ನು ರಕ್ಷಿಸಲು ಬದ್ದವಾಗಿದೆ. ಪಾಕಿಸ್ತಾನ ಮೊದಲು ತನ್ನ ದೇಶದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಅವರ ಹಕ್ಕುಗಳ ದಮನದ ಕುರಿತು ಚಿಂತಿಸಬೇಕಿದೆ ಎಂದು ಹೇಳಿದ್ದಾರೆ. ಇನ್ನು ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಉಡುಪಿಯ ಆರು ಜನ ವಿದ್ಯಾರ್ಥಿನಿಯರು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‍ನ ತ್ರಿಸದಸ್ಯ ಪೀಠ ವಿದ್ಯಾರ್ಥಿನಿಯರ ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪಿನ ವಿರುದ್ದ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಹೋಗಲು ನಿರ್ಧರಿಸಿದ್ದಾರೆ.