ಮಂಗಳವಾರ(Tuesday) ಕರಾಚಿ ವಿಶ್ವವಿದ್ಯಾಲಯದ(Karachi University) ಬಳಿ ಚೀನಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಆತ್ಮಹುತಿ(Bomber) ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಚೀನಾದ ಮೂವರು ವಿದ್ಯಾರ್ಥಿಗಳು ಸಾವಿನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.
ವಿಶ್ವವಿದ್ಯಾಲಯದ ಬಳಿ ಚೀನಾದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿದ್ದ ಬಸ್ ಬರುತ್ತಿದ್ದ ವೇಳೆ, ರಸ್ತೆ ಪಕ್ಕದಲ್ಲಿ ನಿಂತಿದ್ದ ಬುರ್ಖಾಧಾರಿ ಮಹಿಳೆಯೊರ್ವಳು ಬಸ್ ಹತ್ತಿರ ಬರುತ್ತಿದ್ದಂತೆ ರಿಮೋಟ್ ಮೂಲಕ ತನ್ನನ್ನು ಸ್ಪೋಟಿಸಿಕೊಂಡಿದ್ದಾಳೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದಾಳಿಯನ್ನು ಚೀನಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ.
ಇನ್ನು ಕರಾಚಿ ವಿಶ್ವವಿದ್ಯಾಲಯದ ‘ಕನ್‍ಪ್ಪ್ಯೂಷಿಯಸ್ ಇನ್ಸ್‍ಟಿಟ್ಯೂಟ್’ ಬಳಿ ನಡೆದ ಈ ದಾಳಿಯ ಹೊಣೆಯನ್ನು ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯ ‘ಮಜೀದ್ ಬ್ರಿಗೇಡ್’ ವಹಿಸಿಕೊಂಡಿದೆ. ಶಾರಿ ಬಲೋಚ್ ಎಂಬ ಮಹಿಳೆಯನ್ನು ಬಳಸಿಕೊಂಡು ಆತ್ಮಾಹುತಿ ದಾಳಿ ನಡೆಸಲಾಗಿದೆ. ಅಚ್ಚರಿ ಸಂಗತಿ ಎಂದರೆ ಆತ್ಮಾಹುತಿ ದಾಳಿ ನಡೆಸಿದ ಶಾರಿ ಬಲೋಚ್ ಎಂಎಸ್ಸಿ ಪದವೀಧರೆಯಾಗಿದ್ದು, ಉನ್ನತ ಶಿಕ್ಷಣ ಪಡೆದಿದ್ದಳು. ಉತ್ತಮ ಕೆಲಸದಲ್ಲಿದ್ದಳು. ಅದೇ ರೀತಿ ಅವಳ ಗಂಡ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ಎನ್ನಲಾಗಿದೆ.
ಶಾರಿ ಬಲೋಚ್ ಕುಟುಂಬ ಉತ್ತಮ ಶೈಕ್ಷಣಿಕ ಹಿನ್ನಲೆ ಹೊಂದಿರುವ ಕುಟುಂಬವಾಗಿದ್ದು, ಆರ್ಥಿಕವಾಗಿಯೂ ಉತ್ತಮ ಸ್ಥಿತಿಯಲ್ಲಿದ್ದರು ಎನ್ನುವ ಮಾಹಿತಿ ಪ್ರಾಥಮಿಕ ತನಿಖೆಯ ವೇಳೆ ಲಭಿಸಿದೆ. ಇನ್ನು ಇತ್ತೀಚೆಗೆ ಪಾಕಿಸ್ತಾನದಲ್ಲಿ ಚೀನಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳನ್ನು ನಡೆಸಲಾಗುತ್ತಿದೆ. ಕಳೆದ ಜುಲೈನಲ್ಲಿ ಕರಾಚಿಯಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ಅಪರಿಚಿತರು ಚೀನಾ ಪ್ರಜೆಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಈ ಘಟನೆಯಲ್ಲಿ ಇಬ್ಬರು ಚೀನಾ ಪ್ರಜೆಗಳು ಸಾವನ್ನಪ್ಪಿದ್ದರು.
ಇದಕ್ಕೂ ಮುನ್ನ ರಸ್ತೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಚೀನಾದ ಇಂಜಿನಿಯರ್‍ಗಳಿದ್ದ ಬಸ್ ಮೇಲೆ ಐಇಡಿ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ 9 ಚೀನಾ ಪ್ರಜೆಗಳು ಸಾವನ್ನಪ್ಪಿದ್ದರು.