ಇತ್ತೀಚಿನ ದಿನಗಳಲ್ಲಿ ಬೀದಿ ಬದಿಯ ತಿಂಡಿ ಗಾಡಿಗಳು ಹೋಟೆಲ್ಗಳಿಗೆ ಸೆಡ್ಡು ಹೊಡೆಯುವ ಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿವೆ. ಬೀದಿ ಬದಿಯ ಗಾಡಿಗಳ ತಿಂಡಿಗಳು ಹೋಟೆಲ್ಗಳ ತಿಂಡಿಗಳಿಗಿಂತಲೂ ಹೆಚ್ಚು ರುಚಿಯಾಗಿದ್ದು, ಕಡಿಮೆ ದರದಲ್ಲಿ ಸಿಗುತ್ತದೆ ಎನ್ನುವುದು ಜನ ಸಾಮಾನ್ಯರ ನಂಬಿಕೆ. ಕಡಿಮೆ ದರದಲ್ಲಿ ಆಹಾರ ಸಿಗುತ್ತದೆ ಎನ್ನುವುದು ನಿಜ, ಒಂದಿಷ್ಟು ಮಂದಿ ಸ್ವಯಂ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ, ಇವೆಲ್ಲಾ ಸ್ವಾಗತಾರ್ಹ ಬೆಳವಣಿಗೆಗಳೇ.

ಆದರೆ ಇಲ್ಲಿ ಮುಖ್ಯವಾಗಿ ಎದುರಾಗುವುದು ಶುಚಿತ್ವದ(Hygiene) ಪ್ರಶ್ನೆ.
ಹೌದು, ಬಹುಪಾಲು ತಿಂಡಿ ಗಾಡಿಗಳಿರುವುದು ರಸ್ತೆ ಬದಿ, ಚರಂಡಿಗಳ ಬದಿ, ಬಯಲು ಮೈದಾನಗಳಲ್ಲಿಯೇ. ಹಾಗಾಗಿ, ಬೀದಿ ಬದಿ ತಿಂಡಿ ಪ್ರಿಯರು ಕೊಂಚ ಯಾಮಾರಿದರೆ ಬೇಡದ ಅನಾರೋಗ್ಯಗಳೆಲ್ಲ ಮೈಗೆ ಅಂಟಿಕೊಳ್ಳುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ನೇಪಾಳದಲ್ಲಿ(Nepal) ಪಾನಿಪುರಿಯನ್ನೇ(PaniPuri) ಬ್ಯಾನ್ ಮಾಡಲಾಗಿದೆ. ಕಠ್ಮಂಡುವಿನಲ್ಲಿ(Kathmandu) ಪಾನಿ ಪುರಿ ಮಾರಾಟವನ್ನು ಬ್ಯಾನ್ ಮಾಡುವುದರ ಹಿಂದೆ ಬಹುದೊಡ್ಡ ಕಾರಣವಿದೆ.
ನೇಪಾಳದ ರಾಜಧಾನಿ ಕಠ್ಮಂಡು ಕಣಿವೆಯ ಲಲಿತ್ಪುರ ಮೆಟ್ರೋಪಾಲಿಟನ್ ಸಿಟಿಯಲ್ಲಿ 12 ಜನರಲ್ಲಿ ಕಾಲರಾ ರೋಗ ಪತ್ತೆಯಾಗಿದ್ದು, ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ನಗರದಲ್ಲಿ ಪಾನಿ ಪುರಿ ಮಾರಾಟವನ್ನೇ ನಿಷೇಧಿಸಿದ್ದಾರೆ. ಇದಕ್ಕೆ ಕಾರಣವೂ ಇದೆ, ಪಾನಿಪುರಿ ತಯಾರಿಕೆಯಲ್ಲಿ ಕಾಲರಾ ಬ್ಯಾಕ್ಟೀರಿಯಾವನ್ನು ಹರಡುವ ನೀರನ್ನು ಬಳಕೆ ಮಾಡಲಾಗುತ್ತಿದೆ ಎಂಬ ಅನುಮಾನವಿದೆ ಎಂದು ಲಲಿತ್ಪುರ ಮೆಟ್ರೋಪಾಲಿಟನ್ ಸಿಟಿ ಹೇಳಿಕೊಂಡಿದೆ.

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಾಲರಾ ರೋಗ ಹರಡುವ ಅಪಾಯ ಹೆಚ್ಚುತ್ತಿದೆ. ಈ ಹಿನ್ನೆಲೆ ನಗರದ ಜನನಿಬಿಡ ಪ್ರದೇಶಗಳಲ್ಲಿ ಮತ್ತು ಕಾರಿಡಾರ್ ಪ್ರದೇಶದಲ್ಲಿ ಪಾನಿಪುರಿ ಮಾರಾಟವನ್ನು ನಿರ್ಬಂಧಿಸಲು ಆಂತರಿಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಸುದ್ದಿ ನೋಡಿದ ನಂತರವಾದರೂ ಪಾನಿಪುರಿ ಪ್ರಿಯರು, ಪ್ರತಿದಿನ ಬೀದಿ ಬದಿಯ ತಿಂಡಿ ತಿನ್ನುವ ಅಭ್ಯಾಸವಿರುವವರು ಎಚ್ಚೆತ್ತುಕೊಳ್ಳುವುದು ಒಳಿತು.
- ಪವಿತ್ರ ಸಚಿನ್