ತೆಲಂಗಾಣ(Telangana) ಆರೋಗ್ಯ ಅಧಿಕಾರಿಗಳಿಗೆ ಪಾನಿಪುರಿ(Panipuri) ಪ್ರಿಯರು ದೊಡ್ಡ ತಲೆನೋವಾಗಿ ಕಾಡತೊಡಗಿದ್ದಾರೆ. ಸಂಜೆಯಾಗುತ್ತಲೇ ಪಾನಿಪುರಿ ತಿನ್ನಲು ಮುಗಿಬೀಳುವ ಜನ, ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಅಧಿಕಾರಿಗಳದ್ದು. ಪಾನಿಪುರಿ ತಯಾರಿಸುವ ವೇಳೆ ಸ್ವಚ್ಛತೆಯನ್ನು ಕಾಪಾಡುವುದಿಲ್ಲ ಎಂಬ ಆರೋಪಗಳಿವೆ. ಸ್ವಚ್ಛತೆ(Hygiene) ಕಾಪಾಡದ ಕಾರಣ ಇದರಿಂದ ರೋಗಗಳು ಹರಡುತ್ತವೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ತಳ್ಳುವ ಗಾಡಿಗಳಲ್ಲಿ, ಬೀದಿ ಬದಿ ಮಾರುವ ಪಾನಿಪುರಿ ತಿಂದರೆ ರೋಗರುಜಿನಗಳಿಗೆ ತುತ್ತಾಗುವ ಭೀತಿ ಎದುರಾಗಿದೆ. ತೆಲಂಗಾಣ ಆರೋಗ್ಯ ಇಲಾಖೆ ಈ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ತೆಲಂಗಾಣ ಆರೋಗ್ಯ ವಿಭಾಗದ ನಿರ್ದೇಶಕ ಶ್ರೀನಿವಾಸ ರಾವ್ ಮಾತನಾಡಿ, ಪಾನಿಪುರಿ ಸೇವಿಸಿದವರಲ್ಲಿ ಟೈಫಾಯಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದ್ದಾರೆ. ಪಾನಿ ಪುರಿ ವ್ಯಾಪಾರಿಗಳು ಸಹ ಎಚ್ಚರಿಕೆ ವಹಿಸಬೇಕು, ಅಗತ್ಯ ಮುಂಜಾಗ್ರತೆ ವಹಿಸಬೇಕು ಎಂದು ತೆಲಂಗಾಣ ಆರೋಗ್ಯ ಇಲಾಖೆ ಸಲಹೆ ನೀಡಿದರು. ಸತತವಾಗಿ ಮೂರ್ನಾಲ್ಕು ದಿನ ಜ್ವರ ಬಂದರೆ ವೈದ್ಯರನ್ನು ಸಂಪರ್ಕಿಸಬೇಕೆಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಹೌದು, ಮಳೆಗಾಲದಲ್ಲಿ ಹೆಚ್ಚಾಗಿ ಟೈಫಾಯ್ಡ್ ಪ್ರಕರಣಗಳು ದಾಖಲಾಗಿವೆ. ಇದರ ಮೂಲ ಬೆನ್ನತ್ತಿ ಹೊರಟ ಆರೋಗ್ಯಾಧಿಕಾರಿಗಳಿಗೆ ಸಿಕ್ಕಿದ್ದು, ಸ್ವಚ್ಛತೆ ಕಾಪಾಡದ ಸ್ಥಳಗಳಲ್ಲಿನ ಪಾನಿಪುರಿ ಸೇವನೆ. ತೆಲಂಗಾಣದಲ್ಲಿ ಮೇ ತಿಂಗಳಿನಿಂದ ಈವರೆಗೆ 2700 ಟೈಫಾಯ್ಡ್ ಪ್ರಕರಣಗಳು ದಾಖಲಾಗಿದೆ. ಜುಲೈ ತಿಂಗಳಲ್ಲಿ ಇದು 2752ಕ್ಕೆ ಏರಿಕೆಯಾಗಿವೆ. ಈ ಖಾಯಿಲೆ ಬರುತ್ತಿರುವುದೇ ಬೀದಿ ಬದಿಯ ಆಹಾರಗಳಿಂದ ಎಂಬುದು ಈಗ ಬಹುತೇಕ ಖಚಿತಗೊಂಡಿದೆ.
ಜನರು ಹೆಚ್ಚಾಗಿ ಪಾನಿಪುರಿ ತಿನ್ನುತ್ತಿರುವುದರಿಂದಲೇ ಟೈಫಾಯ್ಡ್ ಕಾಣಿಸಿಕೊಳ್ಳುತ್ತಿದೆ. ಸ್ವಚ್ಚ ಕುಡಿಯುವ ನೀರು,

ಆಹಾರ ಸೇವನೆಯಿಂದ ರೋಗಗಳನ್ನು ತಡೆಗಟ್ಟಬಹುದು. ಬೀದಿಬದಿ ಆಹಾರಗಳಿಂದ ಇನ್ನೂ ಹೆಚ್ಚು ರೋಗಗಳು ಕಾಣಿಸಿಕೊಳ್ಳುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಪವಿತ್ರ