Mumbai: ಭಾರತೀಯ ಕ್ರಿಕೆಟ್ (Cricket) ನಿಯಂತ್ರಣ ಮಂಡಳಿಯು ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ (Paris Olympics)ಗಾಗಿ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ (IOA) ಸಂಸ್ಥೆಗೆ 8.5 ಕೋಟಿ ರೂಪಾಯಿಗಳ ನೆರವು ಘೊಷಿಸಿದೆ. ಪ್ಯಾರಿಸ್ನಲ್ಲಿ ನಡೆಯಲಿರುವ 2024ರ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು 117 ಸದಸ್ಯರ ಭಾರತೀಯ ತಂಡ ಪ್ಯಾರಿಸ್ಗೆ ತೆರಳಲಿದೆ.

BCCI ಕಾರ್ಯದರ್ಶಿ ಜಯ್ ಶಾ ಅವರು ಎಕ್ಸ್ನಲ್ಲಿ ಈ ಕುರಿತು ಅಧಿಕೃತ ಘೊಷಣೆ ಮಾಡಿದ್ದು, 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುವ ನಮ್ಮ ಅಸಾಧಾರಣ ಕ್ರೀಡಾಪಟುಗಳನ್ನು ಬಿಸಿಸಿಐ ಬೆಂಬಲಿಸುತ್ತದೆ ಎಂದು ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ನಾವು ಈ ಬೆಂಬಲದ ಅಭಿಯಾನಕ್ಕಾಗಿ IOA ಗೆ 8.5 ಕೋಟಿ ರೂಪಾಯಿಗಳನ್ನು ನೀಡುತ್ತಿದ್ದೇವೆ. ನಮ್ಮ ಇಡೀ ತಂಡಕ್ಕೆ, ನಾವು ಶುಭ ಹಾರೈಸುತ್ತೇವೆ. ಜೈ ಹಿಂದ್! ಎಂದು ಜಯ್ ಶಾ (Jay Shah) ಹೇಳಿದ್ದಾರೆ.
ಇನ್ನು ಫ್ಯಾರಿಸ್ ಕ್ರೀಡಾಕೂಟದಲ್ಲಿ ಒಟ್ಟು 47 ಮಹಿಳಾ ಮತ್ತು 70 ಪುರುಷ ಅಥ್ಲೀಟ್ಗಳು ಭಾರತೀಯ ತಂಡದ ಭಾಗವಾಗಲಿದ್ದಾರೆ. ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ಗಳು 29 ಅಥ್ಲೀಟ್ಗಳೊಂದಿಗೆ ಅತಿ ದೊಡ್ಡ ಪ್ರಾತಿನಿಧ್ಯವನ್ನು ಹೊಂದಿದ್ದು, ಶೂಟರ್ಗಳು 21 ಅಥ್ಲೀಟ್ಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ವೇಟ್ಲಿಫ್ಟಿಂಗ್ನಲ್ಲಿ (Weight Lifting) ಭಾರತವನ್ನು 2021ರ ಟೋಕಿಯೊ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಮಾತ್ರ ಪ್ರತಿನಿಧಿಸಲಿದ್ದಾರೆ. ಈಕ್ವೆಸ್ಟ್ರಿಯನ್, ಜೂಡೋ ಮತ್ತು ರೋಯಿಂಗ್ ನಲ್ಲಿ ಒಬ್ಬರು ಕ್ರೀಡಾಪಟುವಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ, ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿಗೆ ಸಂಬಂಧಿಸಿದಂತೆ ಭಾರತವು ಸುಮಾರು 1:1 ಅನುಪಾತವನ್ನು ಹೊಂದಿದೆ. ಒಟ್ಟು 67 ತರಬೇತುದಾರರು ಮತ್ತು 72 ಇತರ ಸಹಾಯಕ ಸಿಬ್ಬಂದಿಗಳು ಕೂಡಾ ತಂಡದೊಂದಿಗೆ ಪ್ರಯಾಣಿಸುತ್ತಾರೆ.
ಇನ್ನು ಇದೇ ಜುಲೈ (July) 26 ರಿಂದ ಫ್ಯಾರಿಸ್ನಲ್ಲಿ ಕ್ರೀಡಾಕೂಟ ಆರಂಭವಾಗಲಿದೆ. 2016 ಮತ್ತು 2020ರ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿದ್ದ ಬ್ಯಾಂಡ್ಮಿಟನ್ ಆಟಗಾರ್ತಿ ಪಿ.ವಿ ಸಿಂಧು (P.V Sindhu) ಮತ್ತು ಶರತ್ ಕಮಲ್ ಈ ಬಾರಿ ಭಾರತದ ಧ್ವಜಧಾರಿಗಳಾಗಿದ್ದಾರೆ.