ಪಾರ್ಲೆ-ಜಿ(Parle-G) ಬಿಸ್ಕತ್ ತಿನ್ನದವರು ಯಾರಿದ್ದಾರೆ ಹೇಳಿ? ಆ ಬಿಸ್ಕತ್ ರುಚಿಗೆ ಮಾರುಹೋಗದವರು ಯಾರಿದ್ದಾರೆ ಹೇಳಿ? ಪಾರ್ಲೆ-ಜೀ ನಮ್ಮ-ನಿಮ್ಮೆಲ್ಲರ ಅಚ್ಚುಮೆಚ್ಚಿನ ಬಾಲ್ಯದ ಬಿಸ್ಕತ್. ಈ ಬಿಸ್ಕತ್ 82 ವರ್ಷ ಪೂರೈಸಿದ್ದು, 5000 ಕೋಟಿ ರೂ. ವ್ಯಾಪಾರದ ಗಡಿಯನ್ನೂ ಸರಾಗವಾಗಿ ದಾಟಿದೆ.
ಈಗ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ವೆರೈಟಿ ಬಿಸ್ಕೆಟ್ ಗಳು ಬಂದಿವೆ. ಆದ್ರೆ ಇವತ್ತಿಗೆ ಮಾರುಕಟ್ಟೆಯಲ್ಲಿರುವ ಬಿಸ್ಕತ್ ನಾಳೆ ಮಾಯವಾಗಿರುತ್ತದೆ. ಆದರೆ ಸುದೀರ್ಘ ಕಾಲ ಜನರ ಬಾಯಲ್ಲಿ ಉಳಿದಿರುವುದು ನಮ್ಮೀ ಪಾರ್ಲೆಜಿಯೊಂದೇ ಎನ್ನಬಹುದು. ಪಾರ್ಲೆ ಕಂಪನಿಯ ಉತ್ಪನ್ನಗಳು ನಮಗೆ ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನವೇ ಆರಂಭವಾಗಿತ್ತು. 1929 ರಿಂದ ಆರಂಭಗೊಂಡ ಮೊದಲು ಈ ಕಾರ್ಖಾನೆಯಲ್ಲಿ ಕೆಲಸ ಮಾಡ್ತಾ ಇದ್ದದ್ದು ಕೇವಲ 12 ಮಂದಿ ಮಾತ್ರ. ಆಗ ಈ ಬಿಸ್ಕತ್ತಿನ ಹೆಸರು ಪಾರ್ಲೆ – ಗ್ಲುಕೋ ಎಂದಾಗಿತ್ತು.
80ರ ದಶಕದ ಆರಂಭದವರೆಗೂ ಅದೇ ಹೆಸರನ್ನು ಮುಂದುವರಿಸಲಾಗಿತ್ತು. ಆದರೆ 1981 ರಲ್ಲಿ ಕಂಪನಿಯು ಗ್ಲುಕೋ ಎಂಬ ಪದವನ್ನು ಶಾರ್ಟ್ ಮಾಡಿ ಪಾರ್ಲೆ-ಜಿ ಎಂದು ಬದಲಾವಣೆ ಮಾಡಿತು. 80ರ ದಶಕದಲ್ಲಿ ಈ ಬಿಸ್ಕತ್ತು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರ ಫೇವರೇಟ್ ಆಗಿತ್ತು. ಮಕ್ಕಳಿಗೆ ಈ ಬಿಸ್ಕತ್ತು ಇಷ್ಟವಾದ ಬಳಿಕ ಪಾರ್ಲೆ ಜಿ ಯಲ್ಲಿದ್ದ ಜಿ ಯನ್ನು ಜೀನಿಯಸ್ ಎಂದು ಬದಲಾಯಿಸಲಾಯಿತು. ಆದರೂ ಪ್ಯಾಕೆಟ್ ಮೇಲೆ ಜಿ ಎಂದೇ ಬರೆಯಲಾಗಿತ್ತು.
ಅಂದ ಹಾಗೆ ಪಾರ್ಲೆ- ಜಿ ಬಿಸ್ಕತ್ತಿನ ಪ್ಯಾಕೆಟ್ ನಲ್ಲಿರುವ ಮಗು ಯಾರು ಎಂಬುದು ಒಂದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಮಗುವಿನ ಚಿತ್ರಕ್ಕೆ ಸಂಬಂಧಿಸಿದಂತೆ ಈ ಮೂರು ಹೆಸರುಗಳನ್ನು ಸಾಮಾನ್ಯವಾಗಿ ಹೇಳಲಾಗುತ್ತೆ. ನೀರು ದೇಶಪಾಂಡೆ, ಸುಧಾ ಮೂರ್ತಿ ಹಾಗೂ ಗುಂಜನ್ ಗುಂಡಾನಿಯಾ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಈ ಮೂವರಲ್ಲಿ ಒಬ್ಬರ ಬಾಲ್ಯದ ಫೋಟೋ ಇದು ಎಂದು ಅನೇಕರು ಹೇಳುತ್ತಾರೆ. ಅದರಲ್ಲೂ ನೀರೂ ದೇಶಪಾಂಡೆ ಹೆಸರು ಹೆಚ್ಚಾಗಿ ಕೇಳಲಾಗುತ್ತಿದೆ.
ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಪಾರ್ಲೆ ಸಂಸ್ಥೆ ಇದಕ್ಕೆ ಸ್ಪಷ್ಟನೆ ನೀಡುತ್ತದೆ.
ಎಲ್ಲಾ ವದಂತಿಗಳಿಗೆ ಪೂರ್ಣವಿರಾಮ ಹಾಕಿದ ಗ್ರೂಪ್ ನ ಪ್ರಾಡಕ್ಟ್ ಮ್ಯಾನೇಜರ್ ಮಯಂಕ್ ಷಾ, ಪ್ಯಾಕೆಟ್ ನಲ್ಲಿ ಕಂಡು ಬರುವ ಮಗು ಒಂದು ಇಲ್ಯೂಸ್ಟ್ರೇಷನ್ ಆಗಿದೆ. ಈ ಚಿತ್ರವನ್ನು ಎವರೆಸ್ಟ್ ಕ್ರಿಯೇಟಿವ್ ಏಜೆನ್ಸಿ ಸಿದ್ಧಪಡಿಸಿದೆ ಎಂದು ಹೇಳಿದ್ದಾರೆ. ಇನ್ನೊಂದು ಅಚ್ಚರಿಯ ವಿಷಯ ಅಂದ್ರೆ 1996 ರಿಂದ 2006ರವರೆಗಿನ 10 ವರ್ಷಗಳಲ್ಲಿ Parle-G ಬಿಸ್ಕತ್ತಿನ ಬೆಲೆ ಹೆಚ್ಚಾಗಿಯೇ ಇಲ್ಲ! ಅದೂ ಗೋಧಿ, ಸಕ್ಕರೆ ಹಾಲಿನ ಉತ್ತನ್ನಗಳು ಶೇ. 150ರಷ್ಟು ಏರಿಕೆಯಾಗಿದ್ದಾಗ!
ಬೇರೆ ಯಾವುದೇ ಬ್ರ್ಯಾಂಡಿನ ಬಿಸ್ಕತ್ Parle-G ಹತ್ತಿರಕ್ಕೂ ಬಾರದಂತೆ ಗ್ರಾಹಕರು Parle-Gಯನ್ನು ನೆಚ್ಚಿಕೊಂಡಿದ್ದರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಪಾರ್ಲೆ-ಜಿ ಆರ್ಭಟ ಕಂಡು ಬ್ರಿಟಾನಿಯಾ, ಸನ್ ಫೀಸ್ಟು ಇತರ ಬಿಸ್ಕೆಟ್ ಗಳು ಮಾರುಕಟ್ಟೆಯಿಂದ ಸದ್ದಿಲ್ಲದೇ ಇಂದು ಮಾಯವಾಗಿದೆ. ಒಟ್ಟಾರೆ ಪಾರ್ಲೆ-ಜಿ ಬಿಸ್ಕತ್ ಜೊತೆಗೆ ಪಾರ್ಲೆ ಸಂಸ್ಥೆಯ ಇತಿಹಾಸ ನಿಜಕ್ಕೂ ರೋಚಕವಾಗಿದೆ.
- ಪವಿತ್ರ ಸಚಿನ್