ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಸಂಸ್ಥೆಯಿಂದ ಹೊಸ ಪ್ರಾಜೆಕ್ಟ್ ಆದ ಪೆಂಟಗನ್' ಚಿತ್ರವನ್ನು ಘೋಷಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ನಡೆಯುತ್ತಿದ್ದು, ಇದು ಐದು ಕಥೆಗಳನ್ನು ಒಳಗೊಂಡಿರುವ ಸಿನಿಮಾ! ಪ್ರತಿಯೊಂದು ಕಥೆಯನ್ನೂ ಬೇರೆಬೇರೆ ನಿರ್ದೇಶಕರು ನಿರ್ದೇಶಿಸುತ್ತಾರೆ, ಆದ್ದರಿಂದ ಇದು ಐದು ಜನ ನಿರ್ದೇಶಕರನ್ನು ಒಳಗೊಂಡಿರುವ ಸಿನಿಮಾವಾಗಿದೆ. ಈ ಹಿಂದೆ ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ
ಕಥಾ ಸಂಗಮ’ ಚಿತ್ರ ಇದೇ ರೀತಿ ತೆರೆಗೆ ಬಂದಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಶಿವಾಜಿ ಸುರತ್ಕಲ್ ಮತ್ತು ಬದ್ಮಾಶ್ ಸಿನಿಮಾಗಳನ್ನು ನಿರ್ದೇಶಿಸಿರುವ ಆಕಾಶ್ ಶ್ರೀವತ್ಸ, ಚೂರಿಕಟ್ಟೆ ಚಿತ್ರದ ಮೂಲ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ರಾಘು ಶಿವಮೊಗ್ಗ, ನಿನಾಸಮ್ ಸತೀಶ್ ನಟನೆಯ `ಬ್ರಹ್ಮಚಾರಿ’ ಸಿನಿಮಾ ನಿರ್ದೇಶಕ ಚಂದ್ರಮೋಹನ್, ನವ ನಿರ್ದೇಶಕ ಕಿರಣ್ ಕುಮಾರ್ ಜೊತೆಗೆ ಖುದ್ದು ಗುರುದೇಶಪಾಂಡೆಯವರು ಕೂಡ ಒಂದು ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಪೆಂಟಗನ್ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಒಟ್ಟು ಐದು ಸಿನಿಮಾಗಳಲ್ಲಿ ಎರಡು ಸಿನಿಮಾಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಚಿತ್ರದ ತಾರಾಗಣದ ಬಗ್ಗೆ ಮುಂದಿನ ಸುದ್ದಿಗೋಷ್ಠಿಯಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆ ತಂಡದ್ದಾಗಿದೆ.